‘ವಿದಾಯದ ಕೊಡುಗೆ’ಯಾಗಲು ಸಾಧ್ಯವಿಲ್ಲ :ಒಬಾಮ ಆಡಳಿತಕ್ಕೆ ಚೀನಾ ಚಾಟಿ
ಬೀಜಿಂಗ್,ಜ.16: ಅಣ್ವಸ್ತ್ರ ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಅಣ್ವಸ್ತ್ರ ಪ್ರಸರಣೆ ತಡೆ ಒಡಂಬಡಿಕೆ (ಎನ್‌ಪಿಟಿ)ಗೆ ಸಹಿಹಾಕದ ರಾಷ್ಟ್ರಗಳ ಸೇರ್ಪಡೆಯು,ವಿವಿಧ ದೇಶಗಳಿಗೆ ನೀಡುವ ವಿದಾಯದ ಕೊಡುಗೆಯಾಗಲು ಸಾಧ್ಯವಿಲ್ಲವೆಂದು ಚೀನಾ ಮಂಗಳವಾರ ಕಟುವಾಗಿ ಹೇಳಿದೆ.
ಎನ್‌ಎಸ್‌ಜಿಗೆ ಭಾರತದ ಸೇರ್ಪಡೆಯನ್ನು ಚೀನಾ ನಡೆಸುತ್ತಿರುವ ಪ್ರಯತ್ನಗಳನ್ನು ಶೀಘ್ರದಲ್ಲೇ ಅಧಿಕಾರದಿಂದ ನಿರ್ಗಮಿಸಲಿರುವ ಅಮೆರಿಕದ ಒಬಾಮ ಆಡಳಿತವು ರವಿ ವಾರ ಖಂಡಿಸಿದ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ.‘‘ಅಣುಶಕ್ತಿ ಪೂರೈಕೆದಾರರ ಗುಂಪಿಗೆ ಭಾರತವು ಸಲ್ಲಿಸಿರುವ ಅರ್ಜಿ ಹಾಗೂ ಎನ್‌ಪಿಟಿಗೆ ಸಹಿಹಾಕದ ರಾಷ್ಟ್ರಗಳ ಸೇರ್ಪಡೆಯ ವಿಚಾರಗಳ ಬಗ್ಗೆ ಈಗಾಗಲೇ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ ಹಾಗೂ ಅದನ್ನು ನಾನು ಮತ್ತೊಮ್ಮೆ ಪುನರುಚ್ಚರಿಸುವುದಿಲ್ಲ’’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕಾರೆ ಹುವಾ ಚುನ್‌ಯಿಂಗ್ ಸೋಮವಾರ ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತವನ್ನು ಗುರಿಯಿರಿಸಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುತ್ತಿರುವ ಲಷ್ಕರೆ ತಯ್ಯಬಾ,ಜೆಇಎಂ ಹಾಗೂ ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಪಾಕ್ ಮೂಲದ ಸಂಘಟನೆಗಳ ವಿರುದ್ಧ ನಿರ್ಬಂಧ ಹೇರಿಕೆ ಸೇರಿದಂತೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಫ್ರಾನ್ಸ್ ಸಚಿವ ಜೀನ್-ಮಾರ್ಕ್ ಐರಾಲುಟ್ ಚೀನಾವನ್ನು ಆಗ್ರಹಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹುವಾ, ‘ನಾನು ನಿರ್ಬಂಧ ಎಂಬ ಪದವನ್ನು ಇಷ್ಟಪಡುವುದಿಲ್ಲ’ ಎಂದರು. ಈ ವಿಷಯವಾಗಿ ಈಗಾಗಲೇ ಚೀನಾ ತನ್ನ ನಿಲುವನ್ನು ವ್ಯಕ್ತಪಡಿಸಿದ್ದು, ಜೆಇಎಂ ಮತ್ತಿತರ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕಾದರೆ, ಬಲವಾದ ಪುರಾವೆಗಳ ಅಗತ್ಯವಿದೆ ಎಂದಾಕೆ ಹೇಳಿದರು.