ಜ.21 : ಬನ್ನಂಜೆ ರಾಮಾಚಾರ್ಯರ ಜನ್ಮಶತಾಬ್ದಿ

Update: 2017-01-16 16:10 GMT

ಉಡುಪಿ, ಜ.16: ಉಡುಪಿಯ ಕನ್ನಡ ಪತ್ರಿಕಾರಂಗದ ಪಿತಾಮಹರೆನಿಸಿದ ಬನ್ನಂಜೆ ರಾಮಾಚಾರ್ಯರ ಜನ್ಮಶತಾಬ್ದ ಸಮಾರಂಭವನ್ನು ಜ.21ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜನ್ಮ ಶತಾಬ್ದಿ ಸಮಿತಿಯ ಅಧ್ಯಕ್ಷ ರತ್ನಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬನ್ನಂಜೆ ರಾಮಾಚಾರ್ಯ ಜನ್ಮಶತಾಬ್ದ ಸಮಿತಿ ಹಾಗೂ ಪರ್ಯಾಯ ಪೇಜಾವರ ಮಠದ ಜಂಟಿ ಆಶ್ರಯದಲ್ಲಿ ಒಂದು ದಿನದ ಈ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.

ಜ.21ರ ಶನಿವಾರ ಬೆಳಗ್ಗೆ 10 ಗಂಟೆಗೆ ರಾಜಾಂಗಣದಲ್ಲಿ ಕಾರ್ಯಕ್ರಮ ವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿ ದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಹಾಗೂ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಭಾಗವಹಿಸಲಿದ್ದಾರೆ.

ಬೆಳಗ್ಗೆ 11ರಿಂದ ಅಪರಾಹ್ನ 1:00ಗಂಟೆಯವರೆಗೆ ‘ಮಾಧ್ಯಮ ನಿನ್ನೆ-ಇಂದು’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಹಿರಿಯ ಪತ್ರಕರ್ತ ಬೆಂಗಳೂರಿನ ಶರತ್ ಕಲ್ಕೋಡ್ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಪತ್ರಕರ್ತ ಈಶ್ವರ್ ದೈತೋಟ ಹಾಗೂ ಕಾರ್ಕಳದ ಪ್ರೊ.ಎಂ.ರಾಮಚಂದ್ರ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಕುರಿತು ಮಾತನಾಡಲಿದ್ದಾರೆ.

ಅಪರಾಹ್ನ 2:30ರಿಂದ ಬನ್ನಂಜೆ ರಾಮಾಚಾರ್ಯರ ಕೃತಿ ಸಮೀಕ್ಷೆ ಮಣಿಪಾಲದ ಪತ್ರಕರ್ತ ಎ.ಈಶ್ವರಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾಹಿತಿ, ಲೇಖಕರಾದ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಮತ್ತು ಡಾ. ಬೈಕಾಡಿ ಮಹಾಬಲೇಶ್ವರ ರಾವ್ ಅವರು ಉಪನ್ಯಾಸ ನೀಡಲಿದ್ದಾರೆ.

ಸಮಾರೋಪ ಸಮಾರಂಭ ಸಂಜೆ 4:30ಕ್ಕೆ ಶ್ರೀವಿಶ್ವೇಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪತ್ರಿಕೋದ್ಯಮಿ ಟಿ.ಸತೀಶ್ ಯು.ಪೈ ಕೃತಿ ಬಿಡುಗಡೆ ಮಾಡಲಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯ ಮತ್ತು ಎ.ಎಸ್. ಎನ್.ಹೆಬ್ಬಾರ್ ಸಂಸ್ಮರಣ ಭಾಷಣ ಮಾಡಲಿದ್ದಾರೆ.

ಕೊನೆಯಲ್ಲಿ ಪ್ರೊ.ಉದ್ಯಾವರ ಮಾಧವ ಆಚಾರ್ಯ ನಿರ್ದೇಶಿತ ಬನ್ನಂಜೆ ಗೋವಿಂದಾಚಾರ್ಯರು ಅನುವಾದಿಸಿದ ಕಾಳಿದಾಸನ ನಾಟಕ ‘ನೆನಪಾದಳು ಶಕುಂತಳೆ’ ಹಾಗೂ ಪೆರ್ಲ ಸಹೋದರಿಯರಾದ ಅರ್ಥಾ ಮತ್ತು ಅಯನರ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ರತ್ನಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯ ಸಮಿತಿಯ ಪದಾಧಿಕಾರಿಗಳಾದ ಮಾಜಿ ಶಾಸಕ ಯು. ಆರ್.ಸಭಾಪತಿ, ರಾಘವ ನಂಬಿಯಾರ್, ಶಿವಶಂಕರ್ ಹಾಗೂ ಸರ್ವಜ್ಞ ಬನ್ನಂಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News