ಸೃಷ್ಟಿಯ ವೈವಿಧ್ಯವೇ ಎಲ್ಲಾ ಸಂಶೋಧನೆಗಳಿಗೂ ಮೂಲ : ಪಲಿಮಾರುಶ್ರೀ
ಉಡುಪಿ, ಜ.16: ಈ ಸೃಷ್ಟಿಯು ಅನೇಕ ಅಚ್ಚರಿಗಳ ಮೊತ್ತ. ನಮ್ಮ ಪ್ರಾಚೀನರು ಅದರತ್ತ ಬೆರಗಾಗಿ ಚಿಂತನೆ ನಡೆಸಿದರು. ಖಗೋಲ ಹಾಗೂ ಭೂಗೋಲದಲ್ಲಿರುವ ಈ ಅಚ್ಚರಿಗಳ ಅನ್ವೇಷಣೆಯ ಆಸಕ್ತಿಯೇ ಆಧ್ಯಾತ್ಮ ಮತ್ತು ವಿಜ್ಞಾನದ ಉಗಮಕ್ಕೆ ಮೂಲ ಪ್ರೇರಣೆ ಎಂದು ಉಡುಪಿ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಪೂರ್ಣಪ್ರಜ್ಞಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಆಯೋಜಿಸಿದ್ದ ಶುಕ್ರ ಗ್ರಹ ವೀಕ್ಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಖಗೋಲ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಅಪಾರ. ಆಚಾರ್ಯ ಮಧ್ವರೂ ತಮ್ಮ ಕೃತಿಗಳಲ್ಲಿ ಜಗತ್ತು ಬಹು ಚಿತ್ರಗಳ ಆಗರ ಎಂದಿದ್ದಾರೆ ಎಂದರು.
ಆರ್ಯಭಟನಂಥ ಮೇಧಾವಿ ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅವುಗಳ ಅಗಾಧ ಜ್ಞಾನ ಸಂಸ್ಕೃತ ಗ್ರಂಥಗಳಲ್ಲಿದ್ದು, ಅವುಗಳತ್ತ ಯುವಜನತೆ ಆಸಕ್ತಿ ವಹಿಸುವಂತಾಗಬೇಕು ಎಂದರು.
ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯತೀರ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಖಗೋಲ ಶಾಸ್ತ್ರದತ್ತವಿದ್ಯಾರ್ಥಿಗಳ ಒಲವನ್ನು ಅರಳಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ. ಭಟ್ ಕಾರ್ಯಕ್ರಮ ದ ಮಹತ್ವ ವಿವರಿಸಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜಗದೀಶ ಶೆಟ್ಟಿ ವಂದಿಸಿದರು.