ಬಾಲಕಿಯ ಕುತ್ತಿಗೆಯನ್ನು ಸೀಳಿ ರಕ್ತ ಕುಡಿಯಲೆತ್ನಿಸಿದ ಪಾತಕಿ
ಬೆರ್ಹಾಂಪುರ,ಜ.16: ಒಡಿಶಾದ ಗಂಜಾಂ ಜಿಲ್ಲೆಯ ಬಡಾ ಅರ್ಜೀಪಳ್ಳಿ ಎಂಬಲ್ಲಿ ಸಮುದ್ರ ತೀರದಲ್ಲಿ ಮೂರನೇ ತರಗತಿಯ ಬಾಲಕಿಯೋರ್ವಳ ಕತ್ತನ್ನು ಸೀಳಿ ರಕ್ತವನ್ನು ಕುಡಿಯಲೆತ್ನಿಸಿದ್ದ ಸ್ಥಳೀಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯು.ಬೈರಾಗಿ(33) ಬಂಧಿತ ಆರೋಪಿಯಾಗಿದ್ದಾನೆ. ರವಿವಾರ ಬಾಲಕಿ ತನ್ನ ಗೆಳತಿಯರೊಂದಿಗೆ ಮನೆಯ ಬಳಿ ಆಟವಾಡುತ್ತಿದ್ದಾಗ ಪರಿಸರದವನೇ ಆದ ಬೈರಾಗಿ ರೇಜರ್‌ನಿಂದ ಆಕೆಯ ಕತ್ತನ್ನು ಸೀಳಿದ್ದ. ಜೊತೆಯಲ್ಲಿದ್ದವರು ಭಯದಿಂದ ಓಡಿದಾಗ ಬೈರಾಗಿ ಗಾಯಕ್ಕೆ ಬಾಯಿ ಹಾಕಿ ರಕ್ತವನ್ನು ಕುಡಿಯಲು ಪ್ರಯತ್ನಿಸಿದ್ದ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಕೃತ್ಯದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಬೈರಾಗಿಯನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಸಫಲರಾಗಿದ್ದಾರೆ. ಆತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೈಲಿಗೆ ಅಟ್ಟಲಾಗಿದೆ.
ಈ ಬೀಭತ್ಸ ಘಟನೆಗೆ ಕಾರಣ ಗೊತ್ತಾಗಿಲ್ಲ. ಬೈರಾಗಿ ವಿಚಾರಣೆ ವೇಳೆ ಈ ಬಗ್ಗೆ ಬಾಯಿಬಿಟ್ಟಿಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ನಮಿತಾ ಬೆಹ್ರಾ ತಿಳಿಸಿದರು.
ಆದರೆ ಆತ ಮಾನಸಿಕವಾಗಿ ಸ್ವಸ್ಥನಿದ್ದಾನೆ ಎಂದು ಅವರು ಸ್ಪಷ್ಟಪಡಿಸಿದರು.