ವಿಮಾನದಲ್ಲಿ ಪ್ರಯಾಣಿಕರ ಹೊಯ್ ಕೈ: ಪೈಲಟ್‌ನಿಂದ ತುರ್ತು ಭೂಸ್ಪರ್ಶ
ಲಂಡನ್,ಜ.15: ಲೆಬನಾನ್ ರಾಜಧಾನಿ ಬೈರೂತ್‌ನಿಂದ ಲಂಡನ್‌ಗೆ 30 ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದ್ದ ವಿಮಾನವೊಂದರಲ್ಲಿ ಗಗನಸಖಿಯೊಬ್ಬಳ ಮೇಲೆ ಹಲ್ಲೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಪೈಲಟ್ ವಿಮಾನವನ್ನು ಇಸ್ತಾಂಬುಲ್‌ನಲ್ಲಿ ತುರ್ತಾಗಿ ಇಳಿಸಿದ ಘಟನೆ ಸೋಮವಾರ ನಡೆದಿದೆ.
ಬೈರೂತ್‌ನಿಂದ ಆಗಮಿಸಿದ ಮಿಡ್ಲ್‌ಈಸ್ಟ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ ಈ ವಿಮಾನದಲ್ಲಿ ಪ್ರಯಾಣಿಕನೊಬ್ಬ ತನ್ನ ಪತ್ನಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ. ಇದನ್ನು ತಡೆಯಲು ಮಧ್ಯಪ್ರವೇಶಿಸಿದ ಪ್ರಯಾಣಿಕನಿಗೆ ಆತ ಥಳಿಸಿದ್ದ. ಜಗಳವನ್ನು ನಿಲ್ಲಿಸಲು ಬಂದ ಕ್ಯಾಬಿನ್ ಸಿಬ್ಬಂದಿಯ ಪೈಕಿ ಒಬ್ಬನನ್ನು ಬಲವಾಗಿ ದೂಡಿದ ಆತ ಇನ್ನೊಬ್ಬನನ್ನು ಥಳಿಸಿದ್ದ. ಕೆಲವು ನಿಮಿಷಗಳ ಬಳಿಕ ಶಾಂತನಾದ ಈ ವ್ಯಕ್ತಿಯು, ಆನಂತರ ಶೌಚಗೃಹದೆಡೆಗೆ ತೆರಳುತ್ತಿದ್ದಾಗ ಗಗನಸಖಿಯೊಬ್ಬಳನ್ನು ನಿಂದಿಸತೊಡಗಿದ. ಮಾತ್ರವಲ್ಲ ಆಕೆಯ ಮೇಲೆ ಹಲ್ಲೆಗೂ ಯತ್ನಿಸಿದ. ಆಗ ಆತನಿಂದ ಮೊದಲು ಏಟು ತಿಂದ ವ್ಯಕ್ತಿ ಆತನ ಮೇಲೆ ಮುಗಿಬಿದ್ದ. ಆಗ ಕ್ಯಾಬಿನ್ ಸಿಬ್ಬಂದಿ ಇಬ್ಬರನ್ನು ಹಿಡಿದಿಟ್ಟು ಜಗಳವನ್ನು ನಿಲ್ಲಿಸಲು ಯತ್ನಿಸಿದರು.
ಕೊನೆಗೂ ರೋಸಿಹೋದ ಪೈಲಟ್ ವಿಮಾನವನ್ನು ಇಸ್ತಾಂಬುಲ್ ವಿಮಾನನಿಲ್ದಾಣದಲ್ಲಿ ಇಳಿಸಿದ. ಹಾಗೆ ಅದರಲ್ಲಿದ್ದ ಹಿರಿಯ ವಯಸ್ಸಿನ ಪ್ರಯಾಣಿಕನನ್ನು ಭದ್ರತಾಪಡೆಗಳು ವಶಕ್ಕೆ ತೆಗೆದುಕೊಂಡರು.