ಹಿಜಾಬ್ ಧರಿಸಿದ್ದಕ್ಕಾಗಿ ಮುಸ್ಲಿಂ ಬಾಲಕಿಯನ್ನು ಶಾಲಾಬಸ್‌ನಿಂದ ಕೆಳಗಿಳಿಸಿದ ಚಾಲಕಿ
ಲಾಸ್‌ವೇಗಾಸ್,ಜ.15: ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಇನ್ನೊಂದು ಘಟನೆಯಲ್ಲಿ, ಹಿಜಾಬ್ ಧರಿಸಿದ್ದಳೆಂಬ ಕಾರಣಕ್ಕಾಗಿ 15 ವರ್ಷ ವಯಸ್ಸಿನ ಮುಸ್ಲಿಂ ಬಾಲಕಿಯೊಬ್ಬಳನ್ನು ಚಾಲಕಿಯು ಶಾಲಾ ಬಸ್ಸಿನಿಂದ ಕೆಳಗಿಳಿಸಿದ ಘಟನೆ ಉಟಾಹ್ ರಾಜ್ಯದ ಪ್ರೊವೊ ಸಿಟಿಯಲ್ಲಿ ರವಿವಾರ ವರದಿಯಾಗಿದೆ. ಘಟನೆಯ ಬಗ್ಗೆ ಬಾಲಕಿಯ ಪೋಷಕರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದು, ಶಾಲಾಡಳಿತವು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಶನಿವಾರ ಈ ಘಟನೆ ನಡೆದಿದ್ದು, ಟೆಂಪ್‌ವ್ಯೆ ಹೈಸ್ಕೂಲ್‌ನ ವಿದ್ಯಾರ್ಥಿನಿಯಾದ ಜನ್ನಾ ಬಕೀರ್, ಮನೆಗೆ ಹಿಂತಿರುಗಲು ಶಾಲಾ ಬಸ್ಸನ್ನೇರಿದಳು. ಆಗ ಚಾಲಕಿಯು ಇಂಟರ್‌ಕಾಮ್ ಮೂಲಕ, ನೀಲಿ ಬಣ್ಣದ ಸ್ಕಾರ್ಫ್ ಧರಿಸಿದ್ದ ಜನ್ನಾ ಬಕೀರ್‌ಳನ್ನು ಕೆಳಗಿಳಿಯುವಂತೆ ಸೂಚಿಸಿದಳು. ‘‘ ನೀನು ಇಲ್ಲಿಗೆ ಸೇರಿದವಳಲ್ಲವೆಂದು ಆಕೆ ಕಟುವಾಗಿ ಹೇಳಿದ್ದಳು’’ ಎಂದು, ಸಂತ್ರಸ್ತ ಬಾಲಕಿಯ ಕುಟುಂಬದ ವಕೀಲರಾದ ರ್ಯಾಂಡಾಲ್ ಸ್ಪೆನ್ಸರ್ ತಿಳಿಸಿದ್ದಾರೆ.
ಹಿಜಾಬ್ ನನ್ನ ಧರ್ಮದ ಆಚರಣೆಯ ಒಂದು ಭಾಗವಾಗಿದೆ. ನಾನು ಧರಿಸುವ ಬಟ್ಟೆಗೆ ಮ್ಯಾಚ್ ಆಗುವಂತೆ ಹಿಜಾಬ್ ಧರಿಸುತ್ತಿರುತ್ತೇನೆ’’ ಎಂದು ಬಕೀರ್ ಎಬಿಸಿ ನ್ಯೂಸ್ ಸುದ್ದಿಸಂಸ್ಥೆಯ ಜೊತೆಗೆ ಘಟನೆಯ ಬಗ್ಗೆ ವಿವರಿಸುತ್ತಾ ತಿಳಿಸಿದಳು.
ಚಾಲಕಿಯು ತನ್ನನ್ನು ಬಸ್‌ನಿಂದ ಕೆಳಗಿಳಿಸಿದಾಗ ಎಲ್ಲರೂ ನನ್ನೆಡೆಗೆ ನೋಡುತ್ತಿರುವುದನ್ನು ಕಂಡು ಅಳು ಉಕ್ಕಿ ಬಂದಿತೆಂದು ಬಕೀರ್ ಹೇಳಿದ್ದಾಳೆ. ತನ್ನನ್ನು ಬಸ್‌ನಲ್ಲಿ ಹತ್ತಿಸಿಕೊಳ್ಳುವಂತೆ ತಾನು ವಿನಂತಿಸಿದರೂ, ಅದಕ್ಕೆ ಕಿವಿಗೊಡದೆ ಚಾಲಕಿಯು ಬಸ್‌ನ ಬಾಗಿಲನ್ನು ಮುಚ್ಚಿದಳೆಂದು ಆಕೆ ತಿಳಿಸಿದ್ದಾರೆ.
ಆದರೆ ಪ್ರೊವೊ ಸಿಟಿ ಶಾಲೆಯ ವಕ್ತಾರರಾ ಕ್ಯಾಲೆಬ್ ಪ್ರೈಸ್, ಇದು ಜನಾಂಗೀಯ ಭೇದದ ಘಟನೆಯೆಂಬುದನ್ನು ನಿರಾಕರಿಸಿದ್ದಾರೆ. ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ಬಸ್‌ನಲ್ಲಿಯೇ ಸಂಚರಿಸಬೇಕಾಗಿದ್ದು, ಜನ್ನಾ ಬಕೀರ್ ಬೇರೆಯೇ ಬಸ್ಸನ್ನು ಹತ್ತಿದ್ದಳು. ಈ ಕಾರಣದಿಂದ ಚಾಲಕಿಯು ಆಕೆಯನ್ನು ಕೆಳಗಿಳಿಸಿರುವುದಾಗಿ ಶಾಲಾಡಳಿತ ಸ್ಪಷ್ಟಪಡಿಸಿದೆ.