ಬೇಡಿಕೆ ಈಡೇರಿಸಲು ಒತ್ತಾಯ : ದಲಿತ್ ಸೇವಾ ಸಮಿತಿ ಅಹೋರಾತ್ರಿ ಪ್ರತಿಭಟನೆ
ಪುತ್ತೂರು,ಜ.16 : ದಲಿತರು ತಮ್ಮ ಬೇಡಿಕೆಗಳನ್ನು ಮುಂದಿರಿಸಿ ಹಲವಾರು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ್ದರೂ ಕಂದಾಯ ಅಧಿಕಾರಿಗಳು ಹಾಗೂ ನಗರಸಭೆಯ ಅಧಿಕಾರಿಗಳು ಕಡೆಗಣಿಸುತ್ತಲೇ ಬಂದಿದ್ದಾರೆ. ನಮ್ಮ ಬೇಡಿಕೆಗಳಿಗೆ ಸ್ಪಂಧಿಸುವ ಕೆಲಸ ಮಾಡಿಲ್ಲ. ಇದೀಗ ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದು, ಇನ್ನೂ ತಮ್ಮ ತಾಳ್ಮೆಯನ್ನು ಪರೀಕ್ಷೆಸಲು ಮುಂದಾದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತೇವೆ ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಸಿದರು.
ಪುತ್ತೂರು ನಗರಸಭೆಯ ವ್ಯಾಪ್ತಿಯ ಮೂವಪ್ಪು-ಗುರುಂಪುನಾರ್ ರಸ್ತೆ ನಿರ್ಮಾಣವೂ ಸೇರಿದಂತೆ ಐದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಉಪವಿಭಾಗಾಧಿಕಾರಿಗಳ ಕಛೇರಿ ಎದುರು ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆದ ಹಗಲು ರಾತ್ರಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಗುರುಂಪುನಾರ್ ರಸ್ತೆ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ನಾವು ಹಲವಾರು ಬಾರಿ ಮನವಿ ಸಲ್ಲಿಸುತ್ತಾ, ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ ಕಂದಾಯ ಅಧಿಕಾರಿಗಳು ಮನ್ನಣೆ ನೀಡಿಲ್ಲ. ರಸ್ತೆಗೆ ಬೇಕಾಗುವಷ್ಟು ಅಕ್ರಮ ಸಕ್ರಮ ಜಾಗವನ್ನು ರದ್ದು ಪಡಿಸಿ ರಸ್ತೆ ನಿರ್ಮಿಸಿ ಎಂದರೂ ತಹಶೀಲ್ದಾರರಾಗಲೀ, ಉಪವಿಭಾಗಾಧಿಕಾರಿಗಳಾಗಲೀ, ನಗರಸಭೆಯ ಆಯುಕ್ತರಾಗಲೀ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಎಸಿ ಅವರ ಕುತ್ತಿಗೆಗೆ ಕೈ ಹಾಕುತ್ತೇವೆ:
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರತಿಭಟನಾ ಸ್ಥಳವನ್ನು ಮತ್ತೊಂದು ಕಡೆಗೆ ಸ್ಥಳಾಂತರಿಸಲು ಉಪವಿಬಾಗಾಧಿಕಾರಿಗಳು ಸೂಚಿಸಿದ್ದಾರೆ. ನೀವು ಈ ಭಾಗದ ಉಪವಿಭಾಗಾಧಿಕಾರಿಗಳು ಆಗಿದ್ದರೆ, ತಾಕತ್ತಿದ್ದರೆ ಅಂಬೇಡ್ಕರ್ ಅವರ ಫೋಟೋದೊಂದಿಗೆ ಪ್ರತಿಭಟನೆ ನಡೆಸುತ್ತಿರುವ ನಮ್ಮನ್ನು ಸ್ಥಳಾಂತರ ಮಾಡಿನೊಡಿ. ನಿಮ್ಮ ಕತ್ತಿಗೆ ಕೈ ಹಾಕುವ ಕೆಲಸವನ್ನು ನಾವು ಮಾಡುತ್ತೇವೆ. ನಿಮ್ಮನ್ನೂ ಬಿಡುವುದಿಲ್ಲ. ನಿಮ್ಮ ಮೇಲಧಿಕಾರಿಗಳಿಗೂ ಬಗ್ಗುವುದಿಲ್ಲ ಎಂದು ಸವಾಲು ಹಾಕಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ಅವರು ಮಾತನಾಡಿ ಪುತ್ತೂರಿನಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದ ಜನಪ್ರತಿನಿಧಿಗಳು ನೀತಿಗೆಟ್ಟಿದ್ದಾರೆ ಎಂದೇ ಅರ್ಥಎಂದರು. ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದವರು ಯಾವ ಪರುಷಾರ್ಥಕ್ಕಾಗಿ ಜನಪ್ರತಿನಿಧಿಗಳಾಗಿದ್ದೀರಿ ಎಂದು ಪ್ರಶ್ನಿಸಿದ ಅವರು ತಮ್ಮ ಕರ್ತವ್ಯಗಳನ್ನು ಪಾಲನೆ ಮಾಡುವ ನೈತಿಕತೆ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೊರಹೋಗಿ ಎಂದರು. ಸಮಸ್ಯೆಯನ್ನು ಬಗೆಹರಿಸದಿದ್ದರೆ ಅಹಿಂದಾ ಹೋರಾಟಕ್ಕೆ ಜನಾಂದೋಲನ ಮಹಾ ಮೈತ್ರಿ ಬೆಂಬಲ ನೀಡಲಿದ್ದು, ಮುಂದೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ದಲಿತ್ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಗಿರಿಧರ್ ನಾಯ್ಕ ಅವರು ಮಾತನಾಡಿ ದಲಿತ ವರ್ಗದವರೇ ಆಗಿರುವ ಉಪವಿಭಾಗಾಧಿಕಾರಿಗೆ ದಲಿತರ ಬಗ್ಗೆ ಕಣಿಕರ ಇರುತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ದಲಿತರ ಬಗ್ಗೆ ಕಾಳಜಿ ಇಲ್ಲದ ಅವರಿಗೆ ಆ ಪೀಠದಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ ಎಂದ ಅವರು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ದಲಿತ ವರ್ಗದವರಾಗಿಯೂ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಪುತ್ತೂರು ನಗರದ ಬ್ರಹ್ಮನಗರ ಎಂಬಲ್ಲಿನ 11 ಮಂದಿ ದಲಿತ ಮಕ್ಕಳಿಗೆ ಅಂಗನವಾಡಿಯಲ್ಲಿ ಅಸ್ಪಶ್ಯತೆ ಮಾಡಲಾಗುತ್ತಿದೆ. ಅಂಗನವಾಡಿಯಲ್ಲಿ ಈ ಎಲ್ಲಾ ಮಕ್ಕಳನ್ನು ಉಳಿದ ಮಕ್ಕಳಿಂದ ಬೇರೆಯಾಗಿ ಕೂರಿಸಿ ಊಟ ನೀಡಲಾಗುತ್ತಿದೆ. ಅಲ್ಲದೆ ಉಳಿದ ಮಕ್ಕಳಿಗೆ ಲೋಟತುಂಬಾ ಹಾಲು ನೀಡಿದರೆ ಈ ಮಕ್ಕಳಿಗೆ ಅರ್ಧ ಲೋಟ ಹಾಲು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು ಈ ತಾರತಮ್ಯ ನೀತಿಯನ್ನು ತಡೆಯಬೇಕು. ಇಲ್ಲಿನ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಬ್ರಹ್ಮನಗರದ ಕಾಲೊನಿಯ ಈ 11 ಮಕ್ಕಳನ್ನು ಪ್ರತಿಭಟನೆಯಲ್ಲಿ ಎದುರು ಕೂರಿಸಲಾಗಿತ್ತು.
ಪೊರಕೆ ಸೇವೆ-ಎಚ್ಚರಿಕೆ
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಎಂ.ಕೂಸಪ್ಪ ಅವರು ಮಾತನಾಡಿ ಉಪವಿಭಾಗಾಧಿಕಾರಿಗಳಿಗೆ ಭೂಸ್ವಾಧೀನ ಮಾಡಿ ರಸ್ತೆ ನಿರ್ಮಾಣ ಮಾಡಿಕೊಡುವ ವಿಶೇಷ ಜವಾಬ್ದಾರಿ ಇದೆ. ಆದರೆ ಇಲ್ಲಿನ ಕಂದಾಯ ಅಧಿಕಾರಿಗಳು ದಲಿತರ ಪ್ರತಿಭಟನೆಗಳಿಗೆ ಬಗ್ಗುವುದಿಲ್ಲ ಎಂದಾದರೆ ಪೊರಕೆ ಸೇವೆ ಮಾಡಬೇಕಾಗಿ ಬರಬಹುದು. ಅಂಥ ಧೈರ್ಯ,ತಾಕತ್ತು,ನೈತಿಕತೆ ನಮಗಿದೆ ಎಂದರು. ಅಭಿವೃದ್ಧಿಯ ಸುರಿಮಳೆಯನ್ನೇ ಗೈಯುತ್ತಿರುವ ಶಾಸಕರು ಮತ್ತು ಅವರ ಭಕ್ತರ ಸುರಿಮಳೆಯಲ್ಲಿ ಒಂದು ಹನಿಯೂ ಗುರುಂಪುನಾರ್‌ಗೆ ಬಿದ್ದಿಲ್ಲ ಎಂದು ಟೀಕಿಸಿದ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜನಪ್ರತಿನಿಧಿಗಳು ಬದಲಾಗದಿದ್ದರೆ ದಲಿತ ವಿರೋಧಿ ಪಟ್ಟಿಗೆ ಸೇರಿಸಬೇಕಾಗುತ್ತದೆ .ಅಲ್ಲದೆ ಬಾಯಿಗೆ ಬೀಗ ಜಡಿಯುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವೊಲಿಸುವ ಯತ್ನ ವಿಫಲ:
ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರು ಪ್ರತಿಭಟನಾಕಾರರ ಬಳಿಗೆ ಬಂದು ಎರಡು ವಾರದೊಳಗೆ ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ಇನ್ನು ಮುಂದೆ ನಮಗೆ ಯಾವುದೇ ಭರವಸೆ ಬೇಡ. ಕಾಲಾವಕಾಶವೂ ಇಲ್ಲ. ಈಗಲೇ ಆದೇಶ ಮಾಡಿ ಕೊಡಿ ನಾವು ಇಲ್ಲಿಂದ ತೆರಳುತ್ತೇವೆ ಎಂದು ಪಟ್ಟು ಹಿಡಿದ ಕಾರಣ ಮನವೊಳಿಸುವ ಪ್ರಯತ್ನ ವಿಫಲವಾಯಿತು.
ದಲಿತ್ ಸೇವಾ ಸಮಿತಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರಮೋದ್ ತಿಂಗಳಾಡಿ ,ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಆನಂದ ಮಿತ್ತಬೈಲು, ಶಿವಪ್ಪ ಅಟ್ಟೋಳೆ,ಮುಗೇರ ಯುವ ವೇದಿಕೆಯ ತಾಲ್ಲೂಕು ಸಮಿತಿಯ ಅಧ್ಯಕ್ಷ ಶೇಖರ್ ಮಾಡಾವು, ದಲಿತ್ ಸೇವಾ ಸಮಿತಿಯ ಕೇಪು ಶಾಖೆಯ ಅಧ್ಯಕ್ಷ ಸದಾಶಿವ , ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಆಶಾಲತಾ, ಜೊತೆ ಕಾರ್ಯದರ್ಶಿ ಉಮೇಶ್ ತ್ಯಾಗರಾಜೆನಗರ, ಮಾಹಿತಿ ಹಕ್ಕು ಹೋರಾಟಗಾರರಾದ ಬಾಲಚಂದ್ರ ಸೊರಕೆ, ಕೃಷ್ಣ ನಾಯ್ಕಾ, ಅಬ್ದುಲ್ ಖಾದರ್, ಗುರುಂಪುನಾರ್‌ನ ಸ್ಥಳೀಯ ಮುಖಂಡರಾದ ಕೇಶವ,ಹೇಮಚಂದ್ರ,ಪೂವಪ್ಪ,ಜಯರಾಮ,ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ ಸ್ಥಳಾಂತರಕ್ಕೆ ಎಸಿ ಸೂಚನೆ
ವ್ಯರ್ಥವಾದ ಪೊಲೀಸರ ಶಾಮಿಯಾನ
ದಲಿತ್ ಸೇವಾ ಸಮಿತಿಯವರು ಮಿನಿವಿಧಾನ ಸೌಧದ ಬಲ ಬದಿಯಲ್ಲಿ ಶಾಮಿಯಾನ ಅಳವಡಿಸಿ ಪ್ರತಿಭಟನೆ ಆರಂಭಿಸಿದ್ದರು. ಅಂಬೇಡ್ಕರ್ ಭಾವಚಿತ್ರದ ಮುಂದೆ ದೀಪ ಬೆಳಗಿ ಪ್ರತಿಭಟನೆ ಆರಂಭಿಸಲಾಗಿತ್ತು. ಕಚೇರಿಗೆ ಆಗಮಿಸಿದ ವೇಳೆ ಉಪವಿಭಾಗಾಧಿಕಾರಿಗಳು ಇಲ್ಲಿಂದ ಮತ್ತೊಂದು ಕಡೆಗೆ ಪ್ರತಿಭಟನೆಯನ್ನು ಸ್ಥಳಾಂತರಿಸುವಂತೆ ಸೋಚಿಸಿ ಕಚೇರಿಗೆ ತೆರಳಿದರು. ಇದರಿಂದ ಆಕ್ರೋಶಿತರಾದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳು ದಲಿತರನ್ನು ಕೀಳು ಮಟ್ಟದಲ್ಲಿ ನೋಡುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೆ ಪ್ರತಿಭಟನೆಯನ್ನು ಸ್ಥಳಾಂತರಿಸುವುದಿಲ್ಲ ಎಂದು ಪಟ್ಟು ಹಿಡಿದ ಅಲ್ಲೇ ಪ್ರತಿಭಟನೆ ಮುಂದುವರಿಸಿದರು.
ಅಲ್ಲದೆ ಉಪವಿಭಾಗಾಧಿಕಾರಿ, ತಹಶೀಲ್ದಾರ್ ವಿರುದ್ದ ದಿಕ್ಕಾರ ಕೂಗಿದರು. ಈ ಮಧ್ಯೆ ಪ್ರತಿಭಟನೆ ಸ್ಥಳಾಂತರಕ್ಕೆ ಪೊಲೀಸರು ದಲಿತ್ ಸೇವಾ ಸಮಿತಿಯ ಗಿರಿಧರ್ ನಾಯ್ಕೆ ಜೊತೆ ಮಾತುಕತೆ ನಡೆಸಿದರು. ಆ ವೇಳೆ ನಾವು ಶಾಮಿಯಾನ ಹಾಕಲು ಸಿದ್ದರಿಲ್ಲ. ನೀವೇ ಮತ್ತೊಂದು ಕಡೆ ಶಾಮಿಯಾನ ಅಳವಡಿಸಿಕೊಡಿ ಎಂದು ಗಿರಿಧರ್ ನಾಯ್ಕೊ ಅವರು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಸ್ಥಳಾಂತರಕ್ಕಾಗಿ ಪೊಲೀಸರು ಮಿನಿವಿಧಾನ ಸೌಧದ ಎಡ ಬದಿಯಲ್ಲಿ ಶಾಮಿಯಾನ ಅಳವಡಿಸಿದರು.
ಶಾಮಿಯಾನ ಅಳವಡಿಸಿ ಪೊಲೀಸರು ದಲಿತ ಮುಖಂಡರಲ್ಲಿ ಪ್ರತಿಭಟನೆಯನ್ನು ಮತ್ತೊಂದು ಬದಿಗೆ ಸ್ಥಳಾಂತರಿಸಲು ಮನವಿ ಮಾಡಿದ ವೇಳೆ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಷಪ್ಪ ಬೆದ್ರಕಾಡು ಅವರು ಪೊಲೀಸರೊಂದಿಗೆ ನಮ್ಮ ಘರ್ಷಣೆ ಇಲ್ಲ. ಆದರೆ ನಾವು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವುದಿಲ್ಲ. ಬೇಕಾದರೆ ನೀವೇ ನಮ್ಮನ್ನು ಬಲ ಪ್ರಯೋಗ ಮಾಡಿ ಎತ್ತಿಕೊಂಡು ಅಲ್ಲಿಗೆ ಹೋಗಿ. ಅಂಬೇಡ್ಕರ್ ಭಾವಚಿತ್ರವನ್ನೂ ಅಲ್ಲಿಗೆ ಕೊಂಡೋಗಿ. ನಮ್ಮದ್ದೇನು ತಕರಾರು ಇಲ್ಲ ಎಂದರು. ಪ್ರತಿಭಟನೆಕಾರರು ಮತ್ತೊಂದು ಕಡೆಗೆ ತೆರಳಲು ಒಪ್ಪದೆ ಹಠ ಹಿಡಿದು ಕುಳಿತ ಕಾರಣ ಪೊಲೀಸರು ಅಳವಡಿಸಿದ ಶಾಮಿಯಾನ ವ್ಯವಸ್ಥೆ ವ್ಯರ್ಥವಾಯಿತು.
ಎ.ಸಿ. ಭರವಸೆ, ಪ್ರತಿಭಟನೆ ಅಂತ್ಯ:
ರಾತ್ರಿ ಸುಮಾರು 7.30ರ ವೇಳೆಗೆ ಉಪವಿಭಾಗಾಧಿಕಾರಿಗಳು ತಮ್ಮ ಕೊಠಡಿಗೆ ಪ್ರತಿಭಟನಾ ನಿರತ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಗರ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು. ಮಾತುಕತೆಯಂತೆ ಮಂಗಳವಾರ ಬೆಳಿಗ್ಗೆ ಗುರುಂಪುನಾರ್‌ಗೆ ತೆರಳಿ ಸ್ಥಳ ಪರಿಶೀಲನೆ ನಡೆಸುವುದು ಹಾಗೂ ಉಳಿದ ಬೇಡಿಕೆಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಅವರು ಭರವಸೆ ನೀಡಿದರು. ಬಳಿಕ ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಅವರು ಎಲ್ಲರಲ್ಲಿಯೂ ಈ ವಿಚಾರ ತಿಳಿಸಿದರು. ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಬೆಳಿಗ್ಗೆ 9 ಗಂಟೆಗೆ ಪ್ರತಿಭಟನೆ ಆರಂಭಿಸಲಾಗಿದ್ದು ಸುಮಾರು 10 ಗಂಟೆಗಳ ನಿರಂತರ ಪ್ರತಿಭಟನೆ ನಡೆದಿತ್ತು.