×
Ad

ಬಜೆಟ್‌ನಲ್ಲಿ ಮೂಡುಬಿದಿರೆ ತಾಲೂಕು ಘೋಷಣೆ ಖಚಿತ : ಅಭಯಚಂದ್ರ ಜೈನ್ ಭರವಸೆ

Update: 2017-01-16 22:20 IST

ಮೂಡುಬಿದಿರೆ,ಜ.16: ವಿಶೇಷ ತಹಶಿಲ್ದಾರನ್ನು ಹೊಂದಿರುವ ಮೂಡುಬಿದಿರೆಯನ್ನು ಮುಂದಿನ ಬಜೆಟ್‌ನಲ್ಲಿ ತಾಲೂಕಾಗಿ ಘೋಷಿಸುವುದು ಖಚಿತ ಎಂದು ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.

   ಅವರು ಮೂಡುಬಿದಿರೆಯ ಸಮಾಜಮಂದಿರದಲ್ಲಿ ಕಂದಾಯ ಇತರ ಇಲಾಖೆಗಳು ಹಾಗೂ ಮೂಡಬಿದಿರೆ ಪುರಸಭೆ ಇವುಗಳ ಸಹಯೋಗದೊಂದಿಗೆ ಸೋಮವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ತಾಲೂಕು ಘೋಷಣೆಯ ಭರವಸೆಯನ್ನು ನೀಡಿದರು. ಸರ್ಕಾರದ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕು. ಪಡಿತರ ಚೀಟಿಯ ಕುರಿತು ಆಹಾರ ನಿರೀಕ್ಷಕರು, ವಿವಿಧ ಪಿಂಚಣಿದಾರರ ಬಗ್ಗೆ ವೈದ್ಯರು, ಅಧಿಕಾರಿಗಳು ಅನುಕೂಲಕರವಾಗಿ ಸ್ಪಂದಿಸಬೇಕೆಂದು ಸೂಚಿಸಿದರು.

ಪಡಿತರ ಸಮಸ್ಯೆಗೆ ಮೂಡುಬಿದಿರೆಯಲ್ಲೇ ಪರಿಹಾರ:

50, 53 ವಿಲೇವಾರಿ ಪ್ರತಿ ಶನಿವಾರ ಡೀಮ್ಡ್ ಫಾರೆಸ್ಟ್ ಸಮಸ್ಯೆ ಸುಪ್ರೀಂ ಕೋರ್ಟಿನಲ್ಲಿದೆ; ಇತ್ಯರ್ಥವಾದ ಕೂಡಲೇ ಅಕ್ರಮ ಸಕ್ರಮ ಸಮಸ್ಯೆಗಳು ಬಗೆಹರಿಯಲಿವೆ. ರೇಶನ್ ಕಾರ್ಡ್ ಸಮಸ್ಯೆಗಳನ್ನು ಮೂಡಬಿದಿರೆಯಲ್ಲೇ ಸರಿಪಡಿಸಬೇಕಾಗಿದೆ ಎಂದು ಪಿ.ಕೆ. ಥೋಮಸ್ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ರೇಶನ್ ಕಾರ್ಡ್ ಸಂಬಂಧಿತ ತಿದ್ದುಪಡಿಗಳನ್ನು ಮೂಡಬಿದಿರೆಯಲ್ಲೇ ಮಾಡಲಾಗುವುದು ಎಂದು ಆಹಾರ ನಿರೀಕ್ಷಕ ವಾಸು ಶೆಟ್ಟಿ ತಿಳಿಸಿದರು.

   ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ರಸ್ತೆ ದುರಸ್ತಿಗೆ ಶಾಸಕರು ವಿಶೇಷ ಅನುದಾನ ಒದಗಿಸಬೇಕು ಎಂದು ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ವಿನಂತಿಸಿದರು. ದುರಸ್ತಿಗೆ ರೂ. 5 ಲಕ್ಷವನ್ನು ತಮ್ಮ ಅನುದಾನದ ಮೂಲಕ ಒದಗಿಸುವುದಾಗಿ ಎಂದು ಅಭಯಚಂದ್ರ ಜೈನ್ ಭರವಸೆಯಿತ್ತರು.

ಕಲ್ಸಂಕ ತೋಡಿನಲ್ಲಿ ಕೊಳಚೆ ಹೆಚ್ಚಾಗುತ್ತಿದೆ. ಪರಿಸರದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಸ್ಥಳ ಪರಿಶೀಲನೆಗೆ ಬಂದಿಲ್ಲ ಎಂದು ಜಿಲ್ಲಾ ರೈತ ಸಂಘ (ಹಸಿರು ಸೇನೆ)ದ ಕಾರ್ಯದರ್ಶಿ ರೋನಾಲ್ಡ್ ಮೆಂಡೋನ್ಸಾ ಕೇಳಿದಾಗ, ಯಾವ ಅಧಿಕಾರಿಗಳು ಸ್ಪಂದಿಸಿಲ್ಲ.

 ಫೆ.21ರೊಳಗೆ ಅರ್ಜಿ 94 ಸಿ ಅರ್ಜಿ ಸ್ವೀಕಾರ:

    ಆಯುಕ್ತ ರೇಣುಕಾ ಪ್ರಸಾದ್ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು; ಜನರಿಗೆ ಹಕ್ಕುಬದ್ಧವಾಗಿ ಲಭಿಸಬೇಕಾದ ಸರ್ಕಾರಿ ಸೌಲಭ್ಯಗಳ ಬಗ್ಗೆ ತಕ್ಷಣವಲ್ಲದಿದ್ದರೂ ಕಾಲಾನುಕ್ರಮದಲ್ಲಿ ಪರಿಹಾರ ಲಭ್ಯವಾಗುತ್ತದೆ ’ ಎಂದರು. ಸರ್ಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತವರಿಗೆ ಸಂಬಂಧಿಸಿದಂತೆ 94 ಸಿ, 94 ಸಿಸಿ ಅರ್ಜಿಗಳನ್ನು ಸಲ್ಲಿಸುವ ಮತ್ತು ವಿಲೇ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.ಇನ್ನೂ ಬಾಕಿಯಾದವರು ಫೆ.21ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

ಕೃಷಿಕರಿಗೆ ಬಹುಮಾನ:    ಪಾಲಡ್ಕ ಪಂ. ವ್ಯಾಪ್ತಿಯ ಸೀತಾರಾಮ ಶೆಟ್ಟಿ ಅವರು 2016-17ನೇ ಸಾಲಿನ ಉತ್ತಮ ಕೃಷಿಕ -ಪ್ರಥಮ ಬಹುಮಾನಕ್ಕೆ ಪಾತ್ರರಾಗಿದ್ದು ಅವರಿಗೆ ಕೃಷಿ ಇಲಾಖೆಯಿಂದ ರೂ. 15,000ರ ಚೆಕ್‌ನ್ನು ನೀಡಲಾಯಿತು. ಸಭೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪ.ಪಂ. ಪ.ಜಾತಿಯ 9ಮಂದಿಗೆ ಉಚಿತ ಅಡುಗೆ ಅನಿಲ ಜಾಡಿ, ಒಲೆ ವಿತರಿಸಲಾಯಿತು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯಿಂದ 51  ಮಂದಿಗೆ ಭಾಗ್ಯಲಕ್ಷ್ಮೀ ಬಾಂಡ್, ಹೊಸಬೆಟ್ಟು ಪಂ. ವ್ಯಾಪ್ತಿಯ 28 ಮಂದಿಗೆ ಸಾಲ ಮನ್ನಾ ತಿಳಿವಳಿಕೆ ಪತ್ರ, ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಗಳನ್ವಯ 136 ಮಂದಿಗೆ ಪಿಂಚಣಿ, ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿ 22 ಕುಟುಂಬಗಳಿಗೆ ರೂ. 20,000 ಮತ್ತು 33 ಮಂದಿಗೆ 94ಸಿ ಅನ್ವಯ ಹಕ್ಕುಪತ್ರ ವಿತರಿಸಲಾಯಿತು.

   ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ವಿನೋದ್ ಸೆರಾವೋ, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಪಿ. ಕೆ. ಥೋಮಸ್, ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಜಿ.ಪಂ., ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕಾ, ಕೃಷಿ ಅಧಿಕಾರಿ ಜಯರಾಜ್ ಪ್ರಕಾಶ್ ಉಪಸ್ಥಿತರಿದ್ದರು. ತಾ.ಪಂ., ಸದಸ್ಯರು, ಗ್ರಾ.ಪಂ. ಅಧ್ಯಕ್ಷರ ಸಹಿತ ವಿವಿಧ ಮಟ್ಟಗಳ ಜನಪ್ರತಿನಿಗಳು, ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಕಂದಾಯ ಇಲಾಖೆಯ ಮೂಲಕ ಜನರಿಗೆ ಲಭಿಸುತ್ತಿರುವ ಸೇವೆಗಳ ವಿವರ ನೀಡಿದರು. ಉಪತಹಶೀಲ್ದಾರ್  ಅಬ್ದುಲ್ ರೆಹಮಾನ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News