ಸಿಸಿಬಿ ಪೊಲೀಸರ ಕಾರ್ಯಾಚರಣೆ: ಓರ್ವ ಸೆರೆ

Update: 2017-01-16 18:43 GMT

ಮಂಗಳೂರು, ಜ. 16: ನಗರದಲ್ಲಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಘಾನಾ ದೇಶದ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನ ಬಳಿಯಿದ್ದ 5.50 ಲಕ್ಷ ರೂ. ವೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಚಿಗೋಯಿ ್ರಾನ್ಸಿಸ್ ಕ್ರಿಸ್ಟೋರ್ (37) ಎಂದು ಗುರುತಿಸಲಾಗಿದೆ.

ಈತ ಗೋವಾದ ಮೂಲಕ ಮಂಗಳೂರಿಗೆ ಬಂದಿದ್ದು, ಕೊಕೇನ್ ಮಾರಾಟಕ್ಕೆ ಗ್ರಾಹಕರಿಗಾಗಿ ಹುಡುಕಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ನಗರದ ಮಲ್ಲಿಕಟ್ಟೆ ಲೋಬೊ ಲೇನ್ ರಸ್ತೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.

 ಈತ ಸುಮಾರು 2 ವರ್ಷದ ಹಿಂದೆ ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ನಂತರ ಘಾನಾಕ್ಕೆ ವಾಪಸ್ ಹೋಗದೆ ಅನಧಿಕೃತವಾಗಿ ಇಲ್ಲಿ ಭಾರತದಲ್ಲೇ ವಾಸವಾಗಿದ್ದ. ಆರೋಪಿಯಿಂದ 5.50ಲಕ್ಷ ರೂ. ವೌಲ್ಯದ ಕೊಕೇನ್, 2 ಮೊಬೈಲ್ ಹಾಗೂ 3,300 ರೂ. ಸೇರಿದಂತೆ ಒಟ್ಟು 5,55,300ರೂ. ವೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಈ ಹಿಂದೆ 2-3 ಬಾರಿ ಈತನು ಮಂಗಳೂರಿಗೆ ಬಂದು ಹಲವಾರು ಮಂದಿಗೆ ಕೊಕೇನ್‌ನ್ನು ಮಾರಾಟ ಮಾಡಿದ್ದ ಎಂದು ಹೇಳಲಾಗಿದ್ದು, ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

 ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಡಾ.ಸಂಜೀವ್ ಎಂ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News