ಗೋಮಾಂಸ ರಫ್ತು ಮಾಡುವ ಸಂಗೀತ್ ಸೋಮ್ ಗೆ ಹಿಂದೂಗಳೂ ಮತ ನೀಡುತ್ತಾರಾ ?
ಲಕ್ನೌ, ಜ.17 : ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಸೋಮವಾರ ಬಿಜೆಪಿ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಗೊಳಿಸಿದ್ದು ಅದರಲ್ಲಿ 2013ರ ಮುಝಫ್ಫರನಗರ ದಂಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆನ್ನಲಾದ ಶಾಸಕ ಸಂಗೀತ್ ಸೋಮ್ ಹಾಗೂ ಸುರೇಶ್ ರಾನಾ ಅವರಿಗೆ ಟಿಕೆಟ್ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇವರಿಗೆ ಕ್ರಮವಾಗಿ ಸರ್ಧನಾ ಮತ್ತು ಥಾನಾ ಭವನ್ ಕ್ಷೇತ್ರಗಳಿಂದ ಟಿಕೆಟ್ ನೀಡಲಾಗಿದೆ.
ಇವರ ಹೊರತಾಗಿ ಇತರ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರಲ್ಲಿ ಹತ್ತು ಮಂದಿ ಹಾಲಿ ಶಾಸಕರಿಗೆ ಕೂಡ ಬಿಜೆಪಿ ಟಿಕೆಟ್ ನೀಡಿದ್ದು ಕಾರ್ಯಕರ್ತರಲ್ಲಿ ಸಾಕಷ್ಟು ಅಸಹನೆಗೆ ಕಾರಣವಾಗಿದೆಯೆಂದು ಮೂಲಗಳು ತಿಳಿಸಿವೆ.
ಎಲ್ಲಕ್ಕಿಂತ ಮಿಗಿಲಾಗಿ ಜಸ್ಟಿಸ್ ವಿಷ್ಣು ಸಹಾಯ್ ಆಯೋಗವು ಸೋಮ್ ಮತ್ತು ರಾನಾರನ್ನು ಆರೋಪಿಗಳೆಂದು ಹೆಸರಿಸಿರುವ ಹೊರತಾಗಿಯೂ ಬಿಜೆಪಿ ಅವರಿಗೆ ಟಿಕೆಟ್ ನೀಡಿರುವುದು ಹಲವರ ಹುಬ್ಬೇರಿಸಿದೆ.ತಾನು ಅಭಿವೃದ್ಧಿ ಅಜೆಂಡಾದೊಂದಿಗೆ ಚುನಾವಣೆ ಎದುರಿಸುತ್ತಿರುವುದಾಗಿ ಹೇಳುತ್ತಿರುವ ಪಕ್ಷವೊಂದು ಮತೀಯ ದಂಗೆಗಳ ರೂವಾರಿಗಳೆಂದು ತಿಳಿದವರಿಗೆ ಟಿಕೆಟ್ ನೀಡಿರುವುದು ಚುನಾವಣೆಗೆ ಮುಂಚಿತವಾಗಿಯೂ ಮತಗಳ ಧ್ರುವೀಕರಣ ನಡೆಯಬಹುದೆಂಬ ಭಯ ಮೂಡಲು ಕಾರಣವಾಗಿದೆ.
ಬಿಜೆಪಿ ಸಂಗೀತ್ ಸೋಮ್ ಹಾಗೂ ಸುರೇಶ್ ರಾನಾ ಅವರಿಗೆ ಟಿಕೆಟ್ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯ ವಿಷಯವಾಗಿ ಬಿಟ್ಟಿದೆ.
‘‘ಹಿಂದೂಗಳು ಗೋಮಾಂಸ ರಫ್ತುದಾರನೊಬ್ಬನಿಗೆ ಮತ ಚಲಾಯಿಸುತ್ತಾರೆಯೇ?’’ ಎಂದು ಒಬ್ಬರು ಪ್ರಶ್ನಿಸಿದ್ದರೆ ಇನ್ನೊಬ್ಬರು ‘ಪರಿವರ್ತನ್’ ಅಂದರೆ ಇದೇನಾ ಎಂದು ಕೇಳಿದ್ದಾರೆ.
ಇತರ ಪಕ್ಷಗಳ ಶಾಸಕರಾಗಿದ್ದುಕೊಂಡು ಕೇಸರಿ ಪಕ್ಷಕ್ಕೆ ಜಿಗಿದಿರುವ ಹತ್ತು ಮಂದಿ ಸೇರಿದಂತೆ ಒಟ್ಟು 25 ಮಂದಿ ಪಕ್ಷಾಂತರಿಗಳಿಗೆ ಬಿಜೆಪಿ ಸೀಟು ನೀಡಿದೆ.