ಉತ್ತರ ಪ್ರದೇಶದಲ್ಲಿ ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಅಝಾದ್
ಹೊಸದಿಲ್ಲಿ, ಜ.17: ಉತ್ತರ ಪ್ರದೇಶದಲ್ಲಿ ಮುಂದೆ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಹೊತ್ತಿರುವ ಗುಲಾಮ್ ನಬಿ ಅಝಾದ್ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಸೈಕಲ್ ಚಿನ್ನ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಬಣಕ್ಕೆ ದೊರೆತ ಬಳಿಕ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷ ನಡುವೆ ಮೈತ್ರಿಗೆ ಅವಕಾಶ ತೆರೆದುಕೊಂಡಿತ್ತು.
ಚುನಾವಣಾ ಆಯೋಗವು ಸೋಮವಾರ ನೀಡಿದ ತೀರ್ಪಿನಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಅಧಿಕೃತವೆಂದು ಪ್ರಕಟಿಸಿ, ಸೈಕಲ್ ಚಿಹ್ನೆ ಅಖಿಲೇಶ್ ಅವರಿಗೆ ನೀಡಿತ್ತು.
ಚುನಾವಣೆಯಲ್ಲಿ ಸ್ಪರ್ಧಿಸಲು ಸೀಟು ಹಂಚಿಕೆಯ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು. ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಅವರು ಶೀಘ್ರದಲ್ಲೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಅಝಾದ್ ಮಾಹಿತಿ ನೀಡಿದ್ದಾರೆ.
ಲಾಲೂ ಬೆಂಬಲ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರ ಉಪ–ಮುಖ್ಯ ಮಂತ್ರಿ ತೇಜಸ್ವಿ ಯಾದವ್ ಜೊತೆಗೂಡಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅವರ ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ ಪರ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.