ಸುಳ್ಯ ಕ್ಯಾಂಪ್ಕೋ ಎದುರು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ
ಸುಳ್ಯ, ಜ.17: ಪ್ರಧಾನಿ ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿದ್ದರಿಂದ ದೇಶದ ಜನರಿಗೆ ಆಗಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು, ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಸುಳ್ಯ ಕ್ಯಾಂಪ್ಕೋ ಕಚೇರಿ ಎದುರು ದಿನಪೂರ್ತಿ ಉಪವಾಸ ಸತ್ಯಾಗ್ರಹ ನಡೆಯಿತು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಉಮಾನಾಥ ಶೆಟ್ಟಿಯವರು, ಶಂಖ ಊದುವುದರ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ನೋಟು ರದ್ದತಿ ಮೂಲಕ ಮೋದಿ ಸರಕಾರ ರೈತನ ಬಾಳಿನಲ್ಲಿ ಚೆಲ್ಲಾಟ ಮಾಡುತ್ತಿದೆ. ನೋಟು ನಿಷೇಧದ ಕಷ್ಟವನ್ನು ಹೆರಿಗೆ ನೋವಿನ ಕಷ್ಟದ ರೀತಿಯಲ್ಲಿ ವಿಶ್ಲೇಷಿಸಲಾಗಿತ್ತು. ಆದರೆ ನಮ್ಮ ಸಹೋದರಿಯರ ಹೆರಿಗೆ ನೋವಾದರೂ ನಲವತ್ತು ದಿನದಲ್ಲಿ ಹೋಗುತ್ತದೆ. ಮೋದಿ ಸರಕಾರದ ಸೂತಕ ಇನ್ನೂ ಮುಗಿದಿಲ್ಲ ಎಂದ ಅವರು, ನೋಟು ರದ್ಧತಿಯಿಂದ ಪ್ರಧಾನಿ ಅವನತಿ ಆರಂಭ ಗೊಂಡಿದೆ. ಈ ಉಪವಾಸ ನೋಟು ನಿಷೇಧದಿಂದ ಸತ್ತವರಿಗೆ ಸದ್ಗತಿ ಕರುಣಿಸುತ್ತದೆ ಎಂದರು.
ಆಧುನಿಕ ತುಘಲಕ್: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಮಾತನಾಡಿ ಐವತ್ತು ದಿನದೊಳಗೆ ನೋಟು ನಿಷೇಧದ ಸಮಸ್ಯೆ ಪರಿಹಾರವಾಗದಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದು ಪ್ರಧಾನಿ ಹೇಳಿದ್ದರು. ಜನರ ಕಷ್ಟ ನೀಗಿಲ್ಲ. ಹಾಗಾದರೆ ಗಲ್ಲು ಶಿಕ್ಷೆಗೆ ಸಿದ್ಧರಾಗುತ್ತಾರಾ ಎಂದು ಪ್ರಶ್ನಿಸಿದ ಅವರು ನರೇಂದ್ರ ಮೋದಿಯವರು ಮಹಮ್ಮದ್ ಬಿನ್ ತುಘಲಕ್ ಅವರ ಶಿಷ್ಯನಂತೆ. ಹಾಗಾಗಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಹೇಳಿದರು. ಮೋದಿ ಈಗ ವಿದೇಶ ಪ್ರಯಾಣ ನಡೆಸುತ್ತಿಲ್ಲ. ಏಕೆಂದರೆ ಮೋದಿಗೂ ದುಡ್ಡಿನ ಟೈಟ್ ಉಂಟಾಗಿದೆ ಎಂದವರು ವ್ಯಂಗ್ಯವಾಡಿದರು. ಹಿರಿಯ ನ್ಯಾಯವಾದಿ , ಮಾಜಿ ಸಿಪಿಎಂ ನಾಯಕ ಸೂರ್ಯನಾರಾಯಣ ಭಟ್ ಮಾತನಾಡಿ ಮೋದಿಯವರ ನೋಟ್ ಬ್ಯಾನ್‌ನಿಂದಾಗಿ ಯಾರಿಗೂ ಪ್ರಯೋಜನವಾಗಿಲ್ಲ. ಪ್ರಯೋಜನವಾಗಿರುವುದೆ ದೇಶದ ಬಂಡವಾಳಶಾಹಿ ಉದ್ಯಮಿಗಳಿಗೆ ಮಾತ್ರ. ಆರೆಸ್ಸೆಸ್ ರವರ ತಲೆಯಲ್ಲಿ ಮೆದುಳಿಲ್ಲ. ಹಾಗಾಗಿ ಇವರು ಇದನ್ನು ಪ್ರಶ್ನಿಸುತ್ತಿಲ್ಲ ಎಂದವರು ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ , ಕೆಪಿಸಿಸಿ ಸದಸ್ಯರಾದ ಡಾ.ರಘು, ಕೃಷ್ಣಪ್ಪ, ಕಾಂಗ್ರೆಸ್ ನಾಯಕರಾದ ಧನಂಜಯ ಅಡ್ಪಂಗಾಯ, ಕೆ.ಎಂ.ಮುಸ್ತಾಫ, ಅಶೋಕ್ ಚೂಂತಾರು ಮೊದಲಾದವರು ಮಾತನಾಡಿದರು.
ಕಾಂಗ್ರೆಸ್ ನಾಯಕರಾದ ಎಸ್.ಶಂಸುದ್ದೀನ್, ಟಿ.ಎಂ.ಶಹೀದ್, ಸುಧೀರ್ ರೈ ಮೇನಾಲ, ಕೆ.ಗೋಕುಲ್ ದಾಸ್, , ಪಿ.ಎ.ಮಹಮ್ಮದ್, ಅಬ್ದುಲ್ ಗಫೂರ್ ಕಲ್ಮಡ್ಕ, ಅಬ್ದುಲ್ ಮಜೀದ್, ಮಹಮ್ಮದ್ ಫವಾಝ್, ಅನಿಲ್ ರೈ ಮೊದಲಾದವರು ಭಾಗವಹಿಸಿದ್ದರು.
ಸುಳ್ಯ ಕ್ಯಾಂಪ್ಕೋ ಕಚೇರಿ ಎದುರು ನಡೆದ ದಿನಪೂರ್ತಿ ಉಪವಾಸ ಸತ್ಯಾಗ್ರಹದಲ್ಲಿ ಹಲವು ನಾಯಕರು ಪಾಲ್ಗೊಂಡರು. ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಪ್ಪು ಹಣ ತರುತ್ತೇನೆ ಎಂದು ಹೇಳಿದ್ದ ಮೋದಿ ಈಗ ಬಡವರ ಹೊಟ್ಟೆಗೆ ಹೊಡೆದಿದ್ದಾರೆ. ರೈತರನ್ನು ಬೀದಿಗೆ ಬರುವಂತೆ ಮಾಡಿದ್ದಾರೆ ಎಂದರು.
ಉಪವಾಸ ಸತ್ಯಾಗ್ರಹದಲ್ಲಿ ಶಂಖ ಜಾಗಟೆಗಳ ಸದ್ದು ಮೊಳಗಿತು. ಕಿವಿ ಕೇಳದ ಕಣ್ಣು ಕಾಣದ ಕೇಂದ್ರ ಸರಕಾರಕ್ಕೆ ಈ ಮೂಲಕ ಎಚ್ಚರಿಸುವುದಾಗಿ ನಾಯಕರು ಹೇಳಿಕೊಂಡರು. ಕಾಂಗ್ರೆಸ್ ನಾಯಕಿ ಲಕ್ಷ್ಮಿ ಸುಬ್ರಹ್ಮಣ್ಯ ಹಾಗೂ ನಂದರಾಜ್ ಸಂಕೇಶ ಮೋದಲಾದವರು ಹಾಡು ಹಾಡಿ ರಂಜಿಸಿದರು.