ನ್ಯಾಯ ಬೆಲೆ ಅಂಗಡಿಗಳಲ್ಲೇ ಕೂಪನ್ ವಿತರಣೆಗೆ ವ್ಯವಸ್ಥೆ: ಸಚಿವ ಖಾದರ್
ಮಂಗಳೂರು, ಜ. 17: ಪಡಿತರ ಚೀಟಿದಾರ ಗ್ರಾಹಕರಿಗೆ ಸರಿಯಾದ ದರ ಮತ್ತು ಪ್ರಮಾಣದಲ್ಲಿ ರೇಷನ್ ಸಿಗುವಂತಾಗಲು ಕೂಪನ್ ವ್ಯವಸ್ಥೆ ಜಾರಿಗೆ ತಂದಿದ್ದೆವು. ಇದೀಗ ಅದನ್ನು ನ್ಯಾಯ ಬೆಲೆ ಅಂಗಡಿಗಳಲ್ಲೇ ಸೇವಾ ಕೇಂದ್ರ ಆರಂಭಿಸಿ, ಅಲ್ಲೇ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮಾ.31ರೊಳಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಪನ್ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಎಪಿಎಲ್ ಕಾರ್ಡ್ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನದಲ್ಲೇ 1,101 ಮಂದಿ ಆನ್‌ಲೈನ್‌ನಲ್ಲಿ ಕಾರ್ಡ್‌ಗೆ ಅರ್ಜಿಗಳನ್ನು ಹಾಕಿದ್ದಾರೆ. ಬೆಳ್ತಂಗಡಿ ತಾಲೂಕಿನಿಂದ 74 ಮಂದಿ, ಬಂಟ್ವಾಳದಿಂದ 95, ಮಂಗಳೂರಿನಿಂದ 791, ಪುತ್ತೂರಿನಿಂದ 111 ಮತ್ತು ಸುಳ್ಯ ತಾಲೂಕಿನಿಂದ 30 ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ 652 ಮಂದಿ ಸ್ವತಃ ಪ್ರಿಂಟ್ ಪಡೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಮಾತ್ರ ಪಡೆದುಕೊಂಡು ಎಪಿಎಲ್ ಕಾರ್ಡ್ ನೀಡುತ್ತಿದ್ದೇವೆ. ಈ ಯೋಜನೆಯನ್ನು ಇದೀಗ ಸಕಾಲಕ್ಕೆ ಸೇರಿಸಲಾಗಿದೆ ಎಂದರು.
ಬಿಪಿಎಲ್‌ಗೆ ಅರ್ಜಿ ಸಲ್ಲಿಕೆ
ಎಪಿಎಲ್ ಕಾರ್ಡ್ ಯಶಸ್ಸಿನ ಬಳಿಕ ಮುಂದಿನ ವಾರ ಆನ್‌ಲೈನ್ ಮೂಲಕ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಗೆ ಆರಂಭಿಲಾಗುವುದು. ಹಿಂದೆ ಅರ್ಜಿ ಸಲ್ಲಿಸಿದವರು ಕೂಡ ಗ್ರಾಮ ಪಂಚಾಯತ್‌ಗೆ ತೆರಳಿ ದಾಖಲೆ ಸಲ್ಲಿಸಬೇಕು ಎಂದು ಖಾದರ್ ಹೇಳಿದರು.
ರಾಜ್ಯದ ಬಡಜನತೆಗೆ ಇನ್ನು ಮುಂದೆ ಪ್ರೊಟೀನ್‌ಯುಕ್ತ ಆಹಾರ ಧಾನ್ಯ ನೀಡುವ ಬಗ್ಗೆ ಈ ಹಿಂದೆ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ ಇನ್ನು ಅಕ್ಕಿ, ಗೋಧಿ, ಸಕ್ಕರೆ ಜತೆಗೆ ಪ್ರತಿ ಕುಟುಂಬಕ್ಕೆ ಒಂದು ಕೆಜಿ ತೊಗರಿ ಬೇಳೆ ನೀಡಲಿದ್ದೇವೆ. ಈ ಯೋಜನೆಗೆ ಶೀಘ್ರದಲ್ಲೇ ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ ಎಂದರು.
ಈಗಾಗಲೇ ಪಡಿತರ ಚೀಟಿ ಮೂಲಕ ನೀಡುತ್ತಿರುವ ನೀಲಿ ಬಣ್ಣದ ಸೀಮೆಯನ್ನು ಇಲಾಖೆಯು ಸ್ಥಗಿತಗೊಳಿಸಲಿದೆ. ಕೆಲವೆಡೆ ಸೀಮೆಎಣ್ಣೆಗೆ ಬೇಡಿಕೆ ಇರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ನೀಡುವ ಬಗ್ಗೆ ಸಿಎಂ ಜತೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಸೀಮೆಎಣ್ಣೆ ವಿತರಣೆಗೆ ಆಸಕ್ತರು ಜಿಲ್ಲಾ ಉಪನಿರ್ದೇಶಕರನ್ನು ಸಂಪರ್ಕಿಸುವಂತೆ ಸಚಿವರು ತಿಳಿಸಿದರು.