×
Ad

ಪುತ್ತೂರು : ವಿದ್ಯಾರ್ಥಿ ನಜೀಬ್ ಪತ್ತೆಗೆ ಆಗ್ರಹ ಕ್ಯಾಂಪಸ್ ಫ್ರಂಟ್ ನಿಂದ ಉಪವಾಸ ಸತ್ಯಾಗ್ರಹ

Update: 2017-01-17 18:58 IST

ಪುತ್ತೂರು , ಜ.17 : ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿ 90 ದಿನಗಳು ಕಳೆದಿದ್ದರೂ ಇನ್ನೂ ಆತನನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ದೆಹಲಿ ರಾಜ್ಯ ಸರ್ಕಾರದ ಧೋರಣೆಯನ್ನು ವಿರೋಧಿಸಿ ಹಾಗೂ ಶೀಫ್ರ ಪತ್ತೆಗಾಗಿ ಆಗ್ರಹಿಸಿ ಪುತ್ತೂರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ) ವತಿಯಿಂದ ಮಂಗಳವಾರ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ನಗರದ ನಾನಾ ಕಾಲೇಜುಗಳಲ್ಲಿ ಕಲಿಯುಯತ್ತಿರುವ ವಿದ್ಯಾರ್ಥಿಗಳು ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸತ್ಯಾಗ್ರಹ ನಡೆಸಿದರು.

2016ರ ಅಕ್ಟೋಬರ್ 15ರಂದು ಜೆಎನ್‌ಯು ವಸತಿಗೃಹದಲ್ಲಿ ನಜೀಬ್ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಮರುದಿನದಿಂದ ನಜೀಬ್ ನಾಪತ್ತೆಯಾಗಿದ್ದಾರೆ. ಅವರ ತಾಯಿ ವಸತಿ ನಿಲಯಕ್ಕೆ ಬಂದು ನೋಡಿದಾಗ ಮಗನ ಚಪ್ಪಲಿ ಮತ್ತು ಬ್ಯಾಗ್ ಮಾತ್ರ ಅಲ್ಲಿತ್ತು. ಅಂದಿನಿಂದ ಇಂದಿನವರೆಗೂ 90 ದಿನಗಳು ಕಳೆದರೂ ಇನ್ನೂ ಸುಳಿವು ಸಿಕ್ಕಿಲ್ಲ. ನಜೀಬ್ ಪತ್ತೆ ಹಚ್ಚಲು ದೆಹಲಿ ಸರಕಾರ, ಕೇಂದ್ರ ಸರಕಾರ, ಪೊಲೀಸ್ ಇಲಾಖೆ ವಿಫಲವಾಗಿದೆ. ಮಾಧ್ಯಮಗಳು ಕೂಡ ಚಕಾರವೆತ್ತದೆ ಸುಮ್ಮನಾಗಿವೆ ಎಂದು ಅವರು ಆರೋಪಿಸಿದರು.

ನಜೀಬ್ ಪತ್ತೆಗಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಾನಾ ಹಂತದ ಹೋರಾಟ, ಹಕ್ಕೊತ್ತಾಯ ಮಾಡುತ್ತಾ ಬಂದಿದೆ. ಈ ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚುವಲ್ಲಿ ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

 ಕ್ಯಾಂಪಸ್ ಫ್ರಂಟ್ ಆಫ್ ಇಂಡಿಂಯಾ ಸಂಘಟನೆಯ ಪುತ್ತೂರು ತಾಲೂಕು ಅಧ್ಯಕ್ಷ ಅನೀಸ್ ಕುಂಬ್ರ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.

ದ.ಕ. ಜಿಲ್ಲಾ ಸಮಿತಿ ಸದಸ್ಯ ಸಾದಿಕ್ ಜಾರತ್ತಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪುತ್ತೂರು ತಾಲೂಕು ಘಟಕದ ಕಾರ್ಯದರ್ಶಿ ರಶೀದ್ ಸವಣೂರು, ಉಪಾಧ್ಯಕ್ಷ ಶಿಹಾಬ್ ಬೀಟಿಗೆ, ಸದಸ್ಯರಾದ ಸವಾದ್ ಸಂಟ್ಯಾರ್, ಅಝೀಜ್ ಕಲ್ಲರ್ಪೆ, ನಿಝಾಮ್, ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News