ಜನವರಿ ಅಂತ್ಯಕ್ಕೆ ಜಾತಿ ಸಮೀಕ್ಷೆ ವರದಿ ಸರಕಾರಕ್ಕೆ ಸಲ್ಲಿಕೆ: ಸಚಿವ ಆಂಜನೇಯ
ಬಂಟ್ವಾಳ, ಜ. 17: ಡಾ. ಬಿ.ಆರ್.ಅಂಬೇಡ್ಕರ್‌ರವರ ಆಶಯ ಈಡೇರಿಸುವ ದಿಸೆಯಲ್ಲಿ ಇಡೀ ರಾಷ್ಟರದಲ್ಲೇ ಮೊದಲ ಬಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕಳೆದ ವರ್ಷ ನಡೆಸಿರುವ ಜಾತಿ ಸಮೀಕ್ಷೆಯ ವರದಿಯಲ್ಲಿ ಜನವರಿ ಅಂತ್ಯದಲ್ಲಿ ಸರಕಾರಕ್ಕೆ ಸಲ್ಲಿಸಲಾಗುತ್ತಿದ್ದು , ಮುಂದಿನ ಬಜೆಟ್‌ನಲ್ಲಿ ಇದರ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದರು.
ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಕಚೇರಿ ಬಳಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಮತ್ತು ಹೋಬಳಿ ಮಟ್ಟದ ಎರಡು ಅಂಬೇಡ್ಕರ್ ಭವನ ಹಾಗೂ ಗಡಿ ಪ್ರದೇಶಗಳ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್‌ರವರ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ, ಸಮ ಸಮಾಜದ ಕನಸು ಈಡೇರಿಸುವ ನಿಟ್ಟಿನಲ್ಲಿ ಪ್ರತೀ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರ ಮುಂದಾಗಿದ್ದು ಇಡೀ ರಾಷ್ಟ್ರದಲ್ಲೇ ಕರ್ನಾಟಕ ಸರಕಾರ ದಲಿತರ ಹಾಗೂ ಹಿಂದುಳಿದ ವರ್ಗದ ಏಳಿಗೆಗಾಗಿ ಸುಮಾರು 20 ಸಾವಿರ ಕೋಟಿ ರೂ.ಯನ್ನು ಮೀಸಲಿಟಿದ್ದು ಕರ್ನಾಟಕ ಸರಕಾರದ ಈ ಸಾಧನೆಗೆ ಕೇಂದ್ರ ಸರಕಾರದ ಸಮಾಜ ಕಲ್ಯಾಣ ಸಚಿವರು ಶಹಬಾಸ್ ಗಿರಿ ನೀಡಿದ್ದಾರೆ ಎಂದರು.
ಸಚಿವ ಬಿ.ರಮಾನಾಥ ರೈರವರ ಮನವಿ ಮೇರೆಗೆ ಬಂಟ್ವಾಳ ತಾಲೂಕು ಅಂಬೇಡ್ಕರ್ ಭವನಕ್ಕೆ ಹೆಚ್ಚುವಾರಿಯಾಗಿ ಒಂದು ಕೋಟಿ ರೂ.ವನ್ನು ಪ್ರಕಟಿಸಿದ ಸಚಿವ ಅಂಜನೇಯ, ತಾಲೂಕಿನ ಕೇಂದ್ರ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಭವನ ಅತ್ಯಂತ ಸುಂದರ ಮತ್ತು ಸುಸಜ್ಜಿತವಾಗಿ ಮೂಡಿ ಬರುವ ನಿಟ್ಟಿನಲ್ಲಿ ಇನ್ನೂ ಹೆಚ್ಚುವರಿ ಅನುದಾನ ಒದಗಿಸಲು ತಾನು ಬದ್ಧನಾಗಿದ್ದೇನೆ. ಈ ಭವನ ಎಲ್ಲ ಜನಾಂಗದ ಶುಭಸಮಾರಂಭ ಹಾಗೂ ಸರಕಾರಿ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದರು.
ತನಗೆ ರಾಜಕೀಯ ದೀಕ್ಷೆ ನೀಡಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ನನಗೆ ಅಪಾರವಾದ ಗೌರವ ಮತ್ತು ಪ್ರೀತಿ ಇದೆ. ಈ ಜಿಲ್ಲೆಯ ಸಚಿವರು ಅಥವಾ ಶಾಸಕರು ಅಭಿವೃದ್ಧಿಗೆ ಸಂಬಂಧಿಸಿ ಯಾವುದೇ ಕೆಲಸಗಳನ್ನು ಪ್ರಸ್ತಾಪಿಸಿದರೆ ಆದ್ಯತೆಯ ನೆಲೆಯಲ್ಲಿ ಅದನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದರು.
ಸಮಾರಂಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ತಾಪಂ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ್ ಜೈನ್, ರವೀಂದ್ರ ಕಂಬಳಿ, ಶೇಖರ್ ಕುಕ್ಕೇರಿ, ಮಮತಾ ಗಟ್ಟಿ, ಜಯಶ್ರೀ ಕೋಡಂದೂರು, ಮಂಜುಳಾ ಮಾವೆ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪದ್ಮನಾಭ ನರಿಂಗಾನ, ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್, ಲಕ್ಕಪ್ಪ ಬೆಂಗಳೂರು, ಮಾಜಿ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಜಿ.ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಸಚಿವ ರೈ ಅಭಿವೃದ್ಧಿಯ ಹರಿಕಾರ
ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಮಾನಾಥ ರೈರವರ ಇಚ್ಛಾಶಕ್ತಿ ಹಾಗೂ ಬದ್ಧತೆಯಿಂದ ಅಭಿವೃದ್ಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇಡೀ ಕರ್ನಾಟಕ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ಅಂಜನೇಯ ಹೇಳಿದರು.
ಜನರ ಅಣತಿಗೆ ತಕ್ಕಂತೆ ಕಾರ್ಯನಿರ್ವಹಿಸಿದರೆ ಜನರೇ ಅವರ ಕೈ ಹಿಡಿಯುತ್ತಾರೆ ಎಂಬುದಕ್ಕೆ ಸಚಿವ ರಮನಾಥ ರೈರವರೇ ಸಾಕ್ಷಿ. ಜೊತೆಗೆ ದ.ಕ. ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಸರಕಾರಕ್ಕೂ ಬಲ ನೀಡಿದ್ದಾರೆ ಎಂದ ಅವರು, ಸಚಿವ ರೈ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು.