ವಿಶ್ವದ ಪ್ರಭಾವೀ ಪಾಸ್‌ಪೋರ್ಟ್‌ಗಳ ಪಟ್ಟಿ : ಪ್ರಥಮ ಸ್ಥಾನ ಯಾವ ದೇಶಕ್ಕೆ ?
ದುಬೈ, ಜ.17: ವಿಶ್ವದ ಅತ್ಯಂತ ಪ್ರಭಾವೀ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಜರ್ಮನಿ 157 ಮುಕ್ತ ವಿಸಾ ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಏಶಿಯನ್ ರಾಷ್ಟ್ರಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾವನ್ನು ಹಿಂದಿಕ್ಕಿದ ಸಿಂಗಾಪುರ ಅಗ್ರಸ್ಥಾನ ಪಡೆದಿದೆ.ಭಾರತೀಯ ಪಾಸ್‌ಪೋರ್ಟ್‌ಗೆ ಜಾಗತಿಕ ಮಟ್ಟದಲ್ಲಿ 78ನೇ ಸ್ಥಾನ ದೊರೆತಿದೆ.
ಭಾರತವು 46 ಮುಕ್ತ ವಿಸಾ ಅಂಕದೊಂದಿಗೆ 78ನೇ ಸ್ಥಾನದಲ್ಲಿದ್ದು ಚೀನಾ ಮತ್ತು ಪಾಕಿಸ್ತಾನವನ್ನು ಈ ಪಟ್ಟಿಯಲ್ಲಿ ಹಿಂದಿಕ್ಕಿದೆ. ಅಪಘಾನಿಸ್ತಾನವು ಕೇವಲ 23 ಅಂಕದೊಂದಿಗೆ ಈ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ರಾಷ್ಟ್ರೀಯ ಪಾಸ್‌ಪೋರ್ಟ್ ಬಳಸಿ ಇನ್ನೊಂದು ದೇಶಕ್ಕೆ ನಡೆಸುವ ಪ್ರಯಾಣದ ಪ್ರಮಾಣದ ಆಧಾರದಲ್ಲಿ ವಿಶ್ವದ ಜನಪ್ರಿಯ ಅಂತರ್ಜಾಲ ಸಂಸ್ಥೆ ‘ಆರ್ಟನ್ ಕ್ಯಾಪಿಟಲ್’ ಜಾಗತಿಕ ಶ್ರೇಯಾಂಕದ ಪಾಸ್‌ಪೋರ್ಟ್ ಸೂಚ್ಯಾಂಕ ತಯಾರಿಸಿದೆ. ಒಬ್ಬ ವ್ಯಕ್ತಿ ತನ್ನ ದೇಶದ ಪಾಸ್‌ಪೋರ್ಟ್ ಬಳಸಿಕೊಂಡು ಮುಕ್ತ ವಿಸಾ ಅಥವಾ ಆಗಮನ ಸಂದರ್ಭದ ವಿಸಾದ ಮೂಲಕ ಒಂದು ವರ್ಷದಲ್ಲಿ ಭೇಟಿ ನೀಡಿದ ರಾಷ್ಟ್ರಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಈ ಸೂಚ್ಯಾಂಕವನ್ನು ಸಿದ್ದಪಡಿಸಲಾಗುತ್ತದೆ.
ಗಡಿ ದಾಟಿ ಹೋಗಲು ಇರುವ ಅವಕಾಶವನ್ನು ಹೆಚ್ಚಿಸಲು ಮತ್ತು ಆತನ ಕುಟುಂಬಕ್ಕೆ ಭದ್ರತೆ ಸುಧಾರಿಸುವುದು ಈ ಪ್ರಕ್ರಿಯೆಯ ಹಿಂದಿರುವ ಉದ್ದೇಶವಾಗಿದೆ ಎಂದು ಆರ್ಟನ್ ಕ್ಯಾಪಿಟಲ್‌ನ ಸಿಇಒ ಜಾನ್ ಹ್ಯಾನ್‌ಫಿನ್ ಹೇಳಿದ್ದಾರೆ.
ಈ ಸಮೀಕ್ಷೆಗೆ ಹೊಸದಾಗಿ- ವಿಶ್ವ ಮುಕ್ತತೆ ಅಂಕ ಎಂಬ ವಿಭಾಗವನ್ನೂ ಸೇರಿಸಲಾಗಿದೆ. ವಿಶ್ವದಾದ್ಯಂತ ಸಂಚರಿಸಲು ಇರುವ ಮುಕ್ತಾವಕಾಶದ ಪ್ರಮಾಣವನ್ನು ಇಲ್ಲಿ ನಮೂದಿಸಲಾಗುತ್ತದೆ. 2016ರಲ್ಲಿ ಈ ವಿಭಾಗದಲ್ಲಿ 17,925 ಅಂಕ ದಾಖಲಾಗಿದ್ದರೆ 2017ರ ಪ್ರಥಮ ವರ್ಷದಲ್ಲೇ ಈ ಅಂಕದ ಪ್ರಮಾಣ 17,948 ದಾಟಿದೆ. ಗಡಿಗಳು ಮುಕ್ತವಾಗಿರುವುದರ ಸಂಕೇತ ಇದು. ಆದರೆ ಇದೇ ಪ್ರವೃತ್ತಿ ಮುಂದುವರಿಯಲಿದೆಯೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ. ಜಾಗತೀಕರಣದ ಬಗ್ಗೆ ಈಗಿರುವ ಹಿಂದೇಟಿನ ಧೋರಣೆ ಮತ್ತು ಪ್ರಸಕ್ತ ಇರುವ ಗುಳೆ ಹೋಗುವ ಸಮಸ್ಯೆಯ ಕಾರಣ ವಿಶ್ವ ಮುಕ್ತತೆ ಅಂಕದಲ್ಲಿ ಕ್ರಮೇಣ ಇಳಿಮುಖವಾಗುವ ಆತಂಕವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೂಡಿಕೆಯ ಮೂಲಕ ಪೌರತ್ವ ಎಂಬುದು 2 ಬಿಲಿಯನ್ ಅಮೆರಿಕನ್ ಡಾಲರ್ ವೌಲ್ಯದ ಒಂದು ಉದ್ದಿಮೆಯಾಗಿದೆ. ಪ್ರತೀವರ್ಷ ಸುಮಾರು 20 ಸಾವಿರ ಹೂಡಿಕೆದಾರರು ವಿಶ್ವದ ವಿವಿಧೆಡೆ ಹೂಡಿಕೆ ಮಾಡುವ ಮೂಲಕ ದ್ವಿತೀಯ ಪೌರತ್ವ ಪಡೆಯಲು ಮುಂದಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.