ಬಹುಜನ ಸಮಾಜವನ್ನು ಒಗ್ಗೂಡಿಸಿ ಸ್ವತಂತ್ರ ರಾಜಕೀಯ ಅಧಿಕಾರದತ್ತ ಬಿ.ಎಸ್.ಪಿ : ವೇಲಾಯುಧನ್
ಬೆಳ್ತಂಗಡಿ, ಜ.17 : ಬಹುಜನ ಸಮಾಜ ಪಾರ್ಟಿಯು ಸರ್ವ ಜಾತಿ, ಧರ್ಮೀಯ ಬಹುಜನ ಸಮಾಜವನ್ನು ಒಗ್ಗೂಡಿಸಿ ಸಮಾನತೆ, ಸಹೋದರತಾ ಮಂತ್ರದಿಂದ ಸ್ವತಂತ್ರ ರಾಜಕೀಯ ಅಧಿಕಾರದತ್ತ ಮುನ್ನಡೆಯುತ್ತಿದೆ ಎಂದು ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ವೇಲಾಯುಧನ್ ಅಭಿಪ್ರಾಯಪಟ್ಟರು.
ಅವರು ಬಹುಜನ ಸಮಾಜ ಪಾರ್ಟಿಯ ನಾಯಕಿ ಮಾಯಾವತಿ ಅವರ 61ನೇ ಜನ್ಮದಿನಾಚರಣೆಯ ಅಂಗವಾಗಿ ಬಿ.ಎಸ್.ಪಿ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ನೇತೃತ್ವವದಲ್ಲಿ ಜಿಲ್ಲಾ ಬಿ.ಎಸ್.ಪಿ. ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಬೃಹತ್ ದ್ವಿಚಕ್ರ ವಾಹನ ರ್ಯಾಲಿ ಬಳಿಕ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪಕ್ಷದ ಸಿದ್ಧಾಂತದ ಆಧಾರದಲ್ಲಿ ನಾಯಕಿ ಅಕ್ಕಾ ಮಾಯಾವತಿ ಅವರ ಮಾರ್ಗದರ್ಶನದಂತೆ ಈ ದೇಶದಲ್ಲಿ 6 ಸಾವಿರ ಜಾತಿಗಳನ್ನು ಸಹೋದರತ್ವದೆಡೆಗೆ ಮುನ್ನಡೆಸುತ್ತಿದ್ದಾರೆ ಎಂದರು.
ಬಿ.ಎಸ್.ಪಿ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಸಂಜೀವ ಆರ್ ಅಧ್ಯಕ್ಷತೆ ವಹಿಸಿ, ಪಕ್ಷ ಸಂಘಟಿಸುವ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಹುಜನ ಚಿಂತಕ ರಘುಧರ್ಮಸೇನ್ ಅವರು, ನೋಟು ಬ್ಯಾನ್ ಬೆದರಿಕೆಯಿಂದ ನಮ್ಮ ಪಕ್ಷವನ್ನು ಹಿಮ್ಮೆಟ್ಟಿಸಲು ಬಹುಜನ ಸಮಾಜದ ರಾಜಕೀಯ ಸಿದ್ಧಾಂತವನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ ಬಹುಜನ ಸಮಾಜವು ವ್ಯಕ್ತಿಯನ್ನು ಹೊತ್ತು ತಿರುಗುವವರಲ್ಲ . ಸಿದ್ಧಾಂತವನ್ನು ಎದೆಯಲ್ಲಿಟ್ಟುಕೊಂಡು ಪಕ್ಷ ಕಟ್ಟಿದವರು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಬಿ.ಎಸ್.ಪಿ. ಅಧ್ಯಕ್ಷ ಗೋಪಾಲ್ ಮುತ್ತೂರು, ಪ್ರಧಾನ ಕಾರ್ಯದರ್ಶಿ ವಸಂತ ಕಕ್ಯಪದವು, ಸಂಯೋಜಕ ನಾರಾಯಣ ಬೋಧ್ ಮಾತನಾಡಿದರು.
ಜಿಲ್ಲಾ ಬಿ.ಎಸ್.ಪಿ. ಉಪಾಧ್ಯಕ್ಷ ಶಿವರಾಮ್, ಮಂಗಳೂರು ಉತ್ತರ ಕ್ಷೇತ್ರ ಅಧ್ಯಕ್ಷ ಲೋಕೇಶ್ ಮಿತ್ತೂರು, ಪುತ್ತೂರು ವಿ.ಸ. ಕ್ಷೇತ್ರ ಅಧ್ಯಕ್ಷ ನಿಶಾಂತ್ ಉಪಸ್ಥಿತರಿದ್ದರು.
ಲೋಕೇಶ್ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು, ತಾ ಬಿ.ಎಸ್.ಪಿ. ಪ್ರಧಾನ ಕಾರ್ಯದರ್ಶಿ ಗುರು ಇಂದಬೆಟ್ಟು ಸ್ವಾಗತಿಸಿದರು.
ಬೆಳ್ತಂಗಡಿ ಬಿ.ಎಸ್.ಪಿ. ಉಸ್ತುವಾರಿ ಶಿವಪ್ಪ ಗರ್ಡಾಡಿ ವಂದಿಸಿದರು.
ಪುಂಜಾಲಕಟ್ಟೆ ಬಸವನಗುಡಿಯಿಂದ ಹೊರಟ ಬೈಕ್ ರ್ಯಾಲಿ ಮಡಂತ್ಯಾರು,ಪಣಕಜೆ,ಮದ್ದಡ್ಕ, ಗುರುವಾಯನಕೆರೆ ಮೂಲಕ ಬೆಳ್ತಂಗಡಿ ಪ್ರವೇಶಿಸಿ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡಿತು.