ಜಿಲ್ಲೆಗೆ ಅನುದಾನ ಹೆಚ್ಚಿಸಿ ಎಂದ ಸಚಿವ ಖಾದರ್ ಗೆ ಸಚಿವ ಆಂಜನೇಯ ನೀಡಿದ ಬಿರುದು ಏನು ಗೊತ್ತೇ ?
ಬಂಟ್ವಾಳ, ಜ. 17: ಯು.ಟಿ.ಖಾದರ್‌ರೊಬ್ಬ ಕ್ರಿಯಾಶೀಲ ಯುವ ಸಚಿವರಾಗಿದ್ದಾರೆ. ಬುದ್ಧಿವಂತಿಕೆಯಲ್ಲಿ ಅವರೊಬ್ಬ ಮುಸ್ಲಿಮ್ ಬ್ರಾಹ್ಮಣರಾಗಿದ್ದಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳುವ ಮೂಲಕ ಸೇರಿದ್ದ ಇಡೀ ಸಭೆ ಕರತಾಡನ ಮಾಡಿದ ಘಟನೆ ಇಂದು ಮಧ್ಯಾಹ್ನ ಬಿ.ಸಿ.ರೋಡಿನಲ್ಲಿ ನಡೆಯಿತು.
1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಮತ್ತು ಹೋಬಳಿ ಮಟ್ಟದ ಎರಡು ಅಂಬೇಡ್ಕರ್ ಭವನ ಹಾಗೂ ಗಡಿ ಪ್ರದೇಶಗಳ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ ಬಿ.ಸಿ.ರೋಡ್ ತಾಲೂಕು ಪಂಚಾಯತ್ ಕಚೇರಿ ಬಳಿ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಹಾರ ಸಚಿವ ಯು.ಟಿ.ಖಾದರ್ ತನ್ನ ಭಾಷಣದಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚುವರಿ ಅನುದಾನ ನೀಡಬೇಕೆಂದು ನಾವು ಕೇಳುತ್ತಿಲ್ಲ. ಆದರೆ ನಿಮ್ಮ (ಸಚಿವ ಆಂಜನೇಯ) ವಿಧಾನ ಸಭಾ ಕ್ಷೇತ್ರಕ್ಕೆ ಒದಗಿಸುವ ಅನುದಾನಕ್ಕಿಂತ ಶೇಕಡ 1ರಷ್ಟು ಕಡಿಮೆ ಅನುದಾನವನ್ನು ನಮಗೆ ಒದಗಿಸಿದರೆ ಸಾಕು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಸಚಿವ ರಮಾನಾಥ ರೈ ಸಹಿತ ಅತಿಥಿಗಳು ಹಾಗೂ ಇಡೀ ಸಭೆ ನಗೆಗಡಲಲ್ಲಿ ತೇಲಿತ್ತು.
ಸಚಿವ ಯು.ಟಿ.ಖಾದರ್‌ರವರ ಬಳಿಕ ಭಾಷಣ ಮಾಡಿದ ಸಚಿವ ಎಚ್.ಆಂಜನೇಯ, ಯು.ಟಿ.ಖಾದರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವ ಖಾದರ್ ಸಾಹೇಬ್ರು ನನ್ನ ಬುಡಕ್ಕೆ ಕೈಹಾಕಿದ್ದಾರೆ. ಅವರೊಬ್ಬರು ಕ್ರಿಯಾಶೀಲ ಸಚಿವರಾಗಿದ್ದಾರೆ. ಬುದ್ಧಿಬಂತಿಕೆಯಲ್ಲಿ ಅವರೊಬ್ಬ ಮುಸ್ಲಿಮ್ ಬ್ರಾಹ್ಮಣರಾಗಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ಸಂದರ್ಭ ಇಡೀ ಸಭೆ ಕರತಾಡನ ಮಾಡಿತು.