ಸಚಿವ ಖಾದರ್ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿದ್ದು ಯಾರಿಗೆ ?
ಬಂಟ್ವಾಳ, ಜ. 17: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರವರ ಬಗ್ಗೆ ಅವಮಾನಕರ ರೀತಿಯ ಹೇಳಿಕೆ ಅಥವಾ ಟೀಕೆ ಮಾಡುವವರಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಕಚೇರಿ ಬಳಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಮತ್ತು ಹೋಬಳಿ ಮಟ್ಟದ ಎರಡು ಅಂಬೇಡ್ಕರ್ ಭವನ ಹಾಗೂ ಗಡಿ ಪ್ರದೇಶಗಳ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭಾರತದ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅಂಬೇಡ್ಕರ್‌ರವರು ಮೂಲ ಕಾರಣಕರ್ತರಾಗಿದ್ದಾರೆ. ಅವರ ಬಗ್ಗೆ ಕೀಳು ಮಟ್ಟದ ಅವಮಾನಕಾರಿ ಹೇಳಿಕೆ ಹಾಗೂ ಟೀಕೆಯನ್ನು ಸಹಿಸಲು ಎಂದಿಗೂ ಸಾಧ್ಯವಿಲ್ಲ ಎಂದರು.
ಮುಂದೆಯೂ ಸಿದ್ದರಾಮಯ್ಯರವರೇ ಸಿಎಂ:
ಅಧಿಕಾರಕ್ಕೆ ಬರುವ ಮೊದಲೇ ರಸ್ತೆಯಲ್ಲಿ ಕಚ್ಚಾಡುವವರು ಅಧಿಕಾರಕ್ಕೆ ಬಂದಮೇಲೆ ಏನು ಮಾಡಿಯರು ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಸಚಿವ ಖಾದರ್, 2018ಕ್ಕೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಸಿದ್ದರಾಮಯ್ಯರವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಎಚ್.ಆಂಜನೇಯರವರು ಸಮಾಜ ಕಲಾಣ್ಯ ಸಚಿವ, ರಮಾನಾಥ ರೈ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೇ ಮುಂದುವರಿಯುವುದು ಖಚಿತ ಎಂದು ಭವಿಷ್ಯ ನುಡಿಯುತ್ತಿದ್ದಂತೆ ವೇದಿಕೆಯಲ್ಲಿ ಆಸೀನರಾಗಿದ್ದ ಸಚಿವ ಆಂಜನೇಯರವರು ತಕ್ಷಣ ಪ್ರತಿಕ್ರಿಯಿಸಿ ಯು.ಟಿ.ಖಾದರ್ ಆಹಾರ ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಡೀ ಸಭೆ ನಗೆಗಡಲಲ್ಲಿ ತೇಲಿತು.