ರೋಹಿತ್ ವೇಮುಲಾ ಪ್ರಕರಣ: ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ
ಮಂಗಳೂರು, ಜ.17: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ದ.ಕ. ಇದರ ವತಿಯಿಂದ ಹೈದರಾಬಾದ್ ವಿವಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿಗೀಡಾದ ಪ್ರಕರಣಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ನ್ಯಾಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಿತು.
ಈ ಸಂದರ್ಭ ಮಾತನಾಡಿದ ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಮಾತನಾಡಿ, ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರಕರಣದಲ್ಲಿ ನ್ಯಾಯ ಮರೀಚಿಕೆಯಾಗಿದೆ. ವರ್ಷದ ಹಿಂದೆ ನಡೆದ ಆ ಘಟನೆ ದುರದೃಷ್ಟಕರ. ಅದು ಆತ್ಮಹತ್ಯೆಯಲ್ಲ. ಎಬಿವಿಪಿ ರೂಪದ ಜಾತಿಶಕ್ತಿಗಳು ಅತ್ಯಂತ ವ್ಯವಸ್ಥಿತವಾಗಿ ಅವರನ್ನು ಬಲಿ ತೆಗೆದುಕೊಂಡಿದೆ. ಅದನ್ನು ಆತ್ಮಹತ್ಯೆ ಎನ್ನುವ ಬದಲು ಸಾಂಸ್ಥಿಕ ಕೊಲೆ ಅಂದರೆ ತಪ್ಪಾಗಲಾರದು ಎಂದರು.
ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಕಾಲೇಜ್-ವಿವಿ ಕ್ಯಾಂಪಸ್‌ಗಳಲ್ಲಿ ಕೋಮುವಾದಿಗಳ ಅಟ್ಟಹಾಸ ಮೀರುತ್ತಿವೆ. ಒಂದೆಡೆ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರ ಹೂಹಾರ ಹಾಕುವ ಮನುವಾದಿಗಳು ಇನ್ನೊಂದೆಡೆ ದಲಿತರನ್ನು ದಮನಿಸುತ್ತಿದೆ ಎಂದು ಸುರೇಶ್ ಭಟ್ ಬಾಕ್ರಬೈಲ್ ಆರೋಪಿಸಿದರು.
ಈ ಸಂದರ್ಭ ವೇದಿಕೆಯ ಸಂಚಾಲಕ ರಘುವೀರ್ ಸೂಟರ್‌ಪೇಟೆ, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಎಸ್‌ಐಒ ಜಿಲ್ಲಾಧ್ಯಕ್ಷ ತಲ್‌ಹತ್ ಇಸ್ಮಾಯೀಲ್, ದಲಿತ ಸಂಘಟನೆಗಳ ಮುಖಂಡರಾದ ನಿರ್ಮಲ ಕುಮಾರ್, ರಮೇಶ್ ಕೋಟ್ಯಾನ್, ವಿಶುಕುಮಾರ್, ಚಂದ್ರಕುಮಾರ್, ಪ್ರತಾಪ್, ಅಶೋಕ್ ಕೊಂಚಾಡಿ, ವಿದ್ಯಾರ್ಥಿ ಸಂಘಟನೆಯ ಅನಿಲ್ ಕುಮಾರ್, ಜಮಾಅತೆ ಇಸ್ಲಾಮೀ ಹಿಂದ್‌ನ ಶಬ್ಬೀರ್, ಮುಹ್ಸಿನ್ ಮತ್ತಿತರರು ಉಪಸ್ಥಿತರಿದ್ದರು.