×
Ad

21,22ರಂದು ಬೆಂಗಳೂರಿನಲ್ಲಿ ಕರಾವಳಿ ಕನ್ನಡಿಗರ ‘ನಮ್ಮೂರ ಹಬ್ಬ’ : ಯು.ಟಿ.ಖಾದರ್

Update: 2017-01-17 20:38 IST

ಮಂಗಳೂರು, ಜ. 17: ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜನವರಿ 21 ಮತ್ತು 22ರಂದು ಬೆಂಗಳೂರಿನ ಜಯನಗರದ ಚಂದ್ರಗುಪ್ತ ವೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ‘ನಮ್ಮೂರ ಹಬ್ಬ -2017’ ಹಮ್ಮಿಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹಾಗೂ ಕಾರ್ಯಕ್ರಮದ ಗೌರವ ಸಲಹೆಗಾರ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ ಮತ್ತು ಕರಾವಳಿ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗೆ ಪರಿಚಯಿಸುವ ಉತ್ಸವ ಇದಾಗಿದೆ. ಬೆಂಗಳೂರಿನಲ್ಲಿರುವ ಸುಮಾರು 15 ಲಕ್ಷ ಕರಾವಳಿನ ಜನರಿದ್ದು, ಅವರೆಲ್ಲರನ್ನು ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕಲ್ಪಿಸುವ ಹಾಗೂ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಸದುದ್ದೇಶವನ್ನು ನಮ್ಮೂರ ಹಬ್ಬ ಹೊಂದಿಗೆ ಎಂದರು.

ಕಾರ್ಯಕ್ರಮದ ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ ಮಾತನಾಡಿ, ಸಂಸ್ಥೆಯು ಇದೀಗ ನಾಲ್ಕನೆ ಬಾರಿ ಈ ನಮ್ಮೂರ ಹಬ್ಬವನ್ನು ಹಮ್ಮಿಕೊಳ್ಳುತ್ತಿದ್ದು, ಸುಮಾರು ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎಂದರು. ಜ.21ರಂದು ಬೆಳಗ್ಗೆ 10:30ಕ್ಕೆ ನಮ್ಮೂರ ಹಬ್ಬ ಉದ್ಘಾಟನೆಗೊಳ್ಳಲಿದೆ. ಜನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಭುಜಂಗ ಕೊರಗ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಆಹಾರೋತ್ಸವವನ್ನು ಉದ್ಯಮಿಗಳಾದ ಜಿ.ಶ್ರೀನಿವಾಸ ರಾವ್, ‘ನಮ್ಮೂರ ಸಂತೆ’ಯನ್ನು ಕೆ.ಚಂದ್ರಶೇಖರ್, ಫೊಟೋ ಸಂತೆಯನ್ನು ಮಾಲತಿ ಮತ್ತು ಸೋಮಶೇಖರ್ ದಂಪತಿ, ಕಾರ್ಟೂನ್ ಹಬ್ಬವನ್ನು ಹಿರಿಯ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ, ಬಯಲಾಟವನ್ನು ಖ್ಯಾತ ಕಬಡ್ಡಿ ಆಟಗಾರ ಸುರೇಶ್ ಹೆಗ್ಡೆ ಮತ್ತು ಸೆಲ್ಫಿ ಮನೆಯನ್ನು ಉದ್ಯಮಿ ದಿನೇಶ್‌ವೈದ್ಯ ಅಂಪಾರು ಉದ್ಘಾಟಿಸಲಿದ್ದಾರೆ. ಕಾಯಕ್ರಮದ ಅಧ್ಯಕ್ಷತೆಯನ್ನುಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಪ್ರತಿಷ್ಠಿತ ಈ ವರ್ಷದ ‘ಕಿರೀಟ’ ಪ್ರಶಸ್ತಿಯನ್ನು ಮಾಜಿ ಅಡ್ವಕೇಟ್ ಜನರಲ್ ಡಾ.ಬಿ.ವಿ.ಆಚಾರ್ಯ ಅವರಿಗೆ ಪ್ರದಾನ ಮಾಡಲಾಗುವುದು. ಸಚಿವರಾದ ಯು.ಟಿ.ಖಾದರ್ ಮತ್ತು ಉಮಾಶ್ರೀ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ರಾಘವೇಂದ್ರ ಶೆಟ್ಟಿ ತಿಳಿಸಿದರು.

ಗಾಳಿಪಟ ಉತ್ಸವ,ಫೊಟೋ ಸಂತೆ ಮತ್ತು ಕಾರ್ಟೂನ್ ಹಬ್ಬವು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಈ ಎಲ್ಲ ಮನೋರಂಜನೆಗಳ ಜೊತೆಗೆ ಕರಾವಳಿಯಿಂದ ಬರುವ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ನೀರುದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗೂ ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ಈ ಬಾರಿಯ ನಮ್ಮೂರ ಹಬ್ಬದ ವಿಶೇಷವಾಗಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಸುರೇಶ್ ಎನ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News