ಮಗಳನ್ನು ಸುಟ್ಟು ಕೊಂದ ತಾಯಿಗೆ ಮರಣ ದಂಡನೆ
Update: 2017-01-17 21:07 IST
ಲಾಹೋರ್ (ಪಾಕಿಸ್ತಾನ), ಜ. 17: ಕುಟುಂಬದ ಅನುಮತಿಯಿಲ್ಲದೆ ಮದುವೆಯಾದುದಕ್ಕೆ ಶಿಕ್ಷೆಯಾಗಿ ಮಗಳನ್ನು ಜೀವಂತ ಸುಟ್ಟ ಮಹಿಳೆಯೊಬ್ಬಳಿಗೆ ಪಾಕಿಸ್ತಾನದ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿದೆ.
ಕಳೆದ ವರ್ಷದ ಜೂನ್‌ನಲ್ಲಿ ತಾನು ಮಗಳನ್ನು ಸುಟ್ಟು ಕೊಂದಿರುವುದಾಗಿ ಪರ್ವೀನ್ ಬೀಬಿ ಲಾಹೋರ್‌ನ ವಿಶೇಷ ನ್ಯಾಯಾಲಯವೊಂದರಲ್ಲಿ ತಪ್ಪೊಪ್ಪಿಗೆ ನೀಡಿದ್ದಳು. ಕುಟುಂಬವನ್ನು ಅವಮಾನಕ್ಕೆ ಗುರಿಪಡಿಸಿರುವುದಕ್ಕಾಗಿ ತಾನು ಹಾಗೆ ಮಾಡಿದೆ ಎಂಬುದಾಗಿ ತನ್ನ ಕರಾಳ ಕೃತ್ಯಕ್ಕೆ ಕಾರಣ ನೀಡಿದಳು.
ಈ ಮಹಿಳೆಯ ಮಗಳು 18 ವರ್ಷದ ಝೀನತ್ ರಫೀಕ್, ಹಸನ್ ಖಾನ್ ಎಂಬವರನ್ನು ಮದುವೆಯಾಗಿದ್ದರು. ಒಂದು ವಾರದ ಬಳಿಕ ಮದುಮಗಳ ತಾಯಿ ಈ ಕ್ರೂರ ಕೃತ್ಯವನ್ನು ನಡೆಸಿದ್ದಾಳೆ.ಝೀನತ್‌ರ ಸಹೋದರ ಅನೀಸ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.ತಾಯಿ ಮತ್ತು ಸಹೋದರ ಝೀನತ್‌ಗೆ ಮೊದಲು ಹೊಡೆದರು. ಬಳಿಕ ತಾಯಿಯು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದಳು ಎನ್ನುವುದು ಬೆಳಕಿಗೆ ಬಂದಿದೆ.