ಜ.18ರಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಧರಣಿ
ಮಂಗಳೂರು, ಜ.17: ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ಮುಸ್ಲಿಮರನ್ನು ವಿಭಜಿಸುತ್ತಿರುವ ಸಂಘಪರಿವಾರಕ್ಕೆ ಪೊಲೀಸ್ ಇಲಾಖೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟವು ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಜ.18ರಂದು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲು ನಿರ್ಧರಿಸಿದೆ.
ಸಂಘಪರಿವಾರ ದೇಶದ ಇತಿಹಾಸದ ಉದ್ದಕ್ಕೂ ಅಲ್ಪಸಂಖ್ಯಾತರನ್ನು ಹಾಗೂ ದಲಿತರನ್ನು ದಮನ ಮಾಡುತ್ತಾ ಬಂದಿದೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲೂ ಅದರ ವಿರುದ್ಧ ಷಡ್ಯಂತರಗಳನ್ನು ನಡೆಸುತ್ತಾ ಬಂದಿದೆ. ದಲಿತರು ಮತ್ತು ಮುಸ್ಲಿಮರು ಸಂಘಟಿತರಾಗುವುದು ಹಾಗೂ ಅಭಿವೃದ್ಧಿ ಹೊಂದುವುದನ್ನು ಸಹಿಸಲಾಗದ ಸಂಘಪರಿವಾರ , ರಾಷ್ಟ್ರದಾದ್ಯಂತ ವಿವಿಧ ರೀತಿಯ ವೈಭವೀಕೃತ ಹೆಸರುಗಳನ್ನು ಇಟ್ಟುಕೊಂಡು ಹೊಸ ಸಂಘಟನೆಗಳನ್ನು ರೂಪಿಸಿ ಸಂಘಟಿತರಾಗಿ ಸಮುದಾಯಗಳ ವಿರುದ್ಧ ವಿಷಬೀಜವನ್ನು ಬಿತ್ತಿ ಐಕ್ಯತೆಯನ್ನು ಒಡೆಯುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಜ.9ರಂದು ಸಂಘಪರಿವಾರ ಪ್ರಾಯೋಜಕತ್ವದಲ್ಲಿ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಮಕ್ಕಾ ಮಸೀದಿ, ಅಜ್ಮೀರ್ ದರ್ಗಾದ ಬಾಂಬ್ ಸ್ಫೋಟದ ಆರೋಪಿ ಇಂದ್ರೇಶ್ ಕುಮಾರನ ನೇತೃತ್ವದಲ್ಲಿ ನಡೆದ ಸರ್ವಧರ್ಮ ಸದ್ಭಾವನಾ ಸಂಗೋಷ್ಟಿ ಎಂಬ ಕಾರ್ಯಕ್ರಮವನ್ನು ನಿವೃತ್ತ ಡಿಜಿಪಿ ಎಂ ಎನ್ ಕೃಷ್ಣಮೂರ್ತಿಯ ಉಸ್ತುವಾರಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ಡಿಸಿಪಿಗಳನ್ನು ಒಳಗೊಂಡಂತೆ ಕೆಲವು ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ವಿವಿಧ ಅಲ್ಪಸಂಖ್ಯಾತ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದನ್ನು ಮತ್ತು ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿರುವುದು ಜಿಲ್ಲೆಯ ಅಲ್ಪಸಂಖ್ಯಾತರಲ್ಲಿ ಆತಂಕ ಮೂಡಿಸಿದೆ. ಸರಕಾರಿ ಇಲಾಖೆಯು ಸಂಘಪರಿವಾರದ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ವಹಿಸಿರುವ ಪೊಲೀಸ್ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಬೇಕು ಹಾಗೂ ನ್ಯಾಯಂಗ ತನಿಖೆಗೆ ಒಳಪಡಿಸಬೇಕು ಎಂದು ಕಾರ್ಯಕ್ರಮ ಸಂಚಾಲಕ ಅಡ್ವೊಕೇಟ್ ಸಾದುದ್ದೀನ್ ಸ್ವಾಲಿಹ್ ಮತ್ತು ಮಂಗಳೂರು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕೆ. ತಿಳಿಸಿದ್ದಾರೆ.