×
Ad

ಯೆನೆಪೊಯ ಕಾಲೇಜಿನಲ್ಲಿ ‘ನೋಟು ಅಮಾನ್ಯದ ಪರಿಣಾಮ’ ಕುರಿತ ಚರ್ಚಾಗೋಷ್ಠಿ

Update: 2017-01-17 21:29 IST

ಮಂಗಳೂರು, ಜ.17: ಕೇಂದ್ರ ಸರಕಾರವು ಶೇ.86ರಷ್ಟು ಹಣವನ್ನು ಅಮಾನ್ಯಗೊಳಿಸಿದೆ. ಆದರೆ ಆರ್‌ಬಿಐ, ಸುಪ್ರೀಂಕೋರ್ಟ್, ಸಾರ್ವಜನಿಕರ ಅಭಿಪ್ರಾಯವನ್ನು ಕೇಳದೆ ಏಕವ್ಯಕ್ತಿ ಕೈಗೊಂಡ ಕ್ರಮ ಸರಿಯಲ್ಲ. ನೋಟು ಅಮಾನ್ಯದ ಬಳಿಕ ಹಣಕಾಸು ಸಚಿವ, ಆರ್‌ಬಿಐ ಗವರ್ನರ್ ಪ್ರತಿದಿನ ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದರು. ನಮ್ಮ ಖಾತೆಯಲ್ಲಿರುವ ಹಣವನ್ನು ನಾವೇ ತೆಗೆದುಕೊಳ್ಳದ ಹಾಗೆ ಮಾಡಿರುವುದಂತೂ ಕ್ಷಮಿಸಲು ಅಸಾಧ್ಯ. ಸಾರ್ವಜನಿಕರ ಹಣದ ಮೇಲೆ ಪ್ರಧಾನಿಹೆ ಹಿಡಿತ ಯಾಕೆ? ಎಂದು ಬಂಟ್ವಾಳದ ಎಸ್‌ವಿಎಸ್ ಕಾಲೇಜಿನ ವಾಣಿಜ್ಯ ವಿಭಾಗದ ನಿವೃತ್ತ ಪ್ರೊ. ಬಿ.ವಿ. ರಘುನಂದನ್ ಪ್ರಶ್ನಿಸಿದರು.

ಯೆನೆಪೊಯ ಪದವಿ ಕಾಲೇಜು ವತಿಯಿಂದ ಭಾರತದ ಆರ್ಥಿಕತೆಯ ಮೇಲೆ ‘ನೋಟು ಅಮಾನ್ಯದ ಪರಿಣಾಮ’ ಎಂಬ ವಿಷಯದ ಕುರಿತು ಮಂಗಳವಾರ ಕಾಲೇಜಿನಲ್ಲಿ ನಡೆದ ಚರ್ಚಾಗೋಷ್ಠಿಯಲ್ಲಿ ಅವರು ವಿಷಯ ಮಂಡಿಸಿದರು.

ಭ್ರಷ್ಟಾಚಾರ, ನಕಲಿ ನೋಟು, ಉಗ್ರರ ಹಾವಳಿ ತಡೆ, ಹವಾಲ ಹಣವನ್ನು ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ಮೋದಿ ಕೈಗೊಂಡ ಕ್ರಮ ಸ್ವಾಗತಾರ್ಹ. ನೋಟು ಅಮಾನ್ಯ ಕ್ರಮ ಕೆಟ್ಟದು. ಬಿ.ಸಿ. ರೋಡ್‌ನಲ್ಲಿನ ಎಟಿಎಂಗಳು ಬಂದ್ ಆಗಿವೆ. ಹಣವಿಲ್ಲ ಎಂಬ ಬೋರ್ಡ್‌ಗಳನ್ನು ತೂಗಿ ಹಾಕಿವೆ ಎಂದು ರಘುನಂದನ್ ಹೇಳಿದರು.

ವಿದೇಶಗಳಲ್ಲಿ ಸಾರ್ವಜನಿಕ ವಿರೋಧಿ ಯೋಜನೆಗಳು ಜಾರಿಯಾದಲ್ಲಿ ಪ್ರತಿಭಟನೆಯನ್ನು ಕೈಗೊಳ್ಳುತ್ತಾರೆ. ವಾರದಲ್ಲೇ ಯೋಜನೆಗಳ ರೂಪುರೇಷೆ ಬದಲಾಗುತ್ತದೆ. ಡಿಜಿಟಲ್ ಇಂಡಿಯಾದಲ್ಲಿ ನೆಟ್‌ವರ್ಕ್ ದೊರೆಯುತ್ತಿಲ್ಲ. ಸೀಮೆ ಎಣ್ಣೆ, ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲುತ್ತಿದ್ದ ಜನತೆ ಈಗ ಎಟಿಎಂ, ಬ್ಯಾಂಕ್‌ಗಳ ಮುಂದೆಯೂ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಅವರು ಆರೋಪಿಸಿದರು.

ನೋಟು ಅಮಾನ್ಯದಿಂದ ಜನಸಾಮಾನ್ಯರಿಗೆ ಸಂಕಷ್ಟ ಉಂಟಾಗಿರುವುದು ನಿಜ. ಎಟಿಎಂ ಕ್ಯೂನಲ್ಲಿ ನಿಂತಿರುವ ಸಂದರ್ಭ ಸಾವು-ನೋವುಗಳು ನಡೆದಿವೆ. ಆದರೆ ಸಾವುಗಳಿಗೂ ಕ್ಯೂನಲ್ಲಿ ನಿಂತಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಇವೆಲ್ಲ ಕಾಕತಾಳೀಯವಾಗಿದೆ. ರಾಜಕೀಯ ಪಕ್ಷಗಳು ದೇಣಿಗೆಗಳನ್ನು ಸ್ವೀಕರಿಸುವ ಮೂಲಕ ದೊಡ್ಡ ಮಾಫಿಯಾ ನಡೆಸುತ್ತಿವೆ. ರಾಜಕೀಯದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಯಲು ಮೋದಿ ಮುಂದಾಗಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಹೇಳಿದರು.

 ನೋಟು ಅಮಾನ್ಯ ದೇಶದ ದೊಡ್ಡ ಹಗರಣವಾಗಿದೆ. ಭ್ರಷ್ಟಾಚಾರ, ಕಪ್ಪು ಹಣ, ಉಗ್ರರ ಹಾವಳಿ ತಡೆಗಟ್ಟಲು ಮೋದಿ ಕೈಗೊಂಡಿರುವ ಕ್ರಮ ಜನವಿರೋಧಿಯಾಗಿದೆ. ಶೇ.97ರಷ್ಟು ಹಣ ಮರಳಿದೆ ಎನ್ನಲಾಗಿದೆ. ಶೇ.30ರಷ್ಟು 500, 1000 ರೂ. ಮುಖಬೆಲೆಯ ನೋಟುಗಳು ಕಪ್ಪುಹಣವಾಗಿದೆ ಎನ್ನುವುದಾದರೆ ಆ ಶೇ.30ರಷ್ಟು ಕಪ್ಪುಹಣವೀಗ ಎಲ್ಲಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಕಂದಕ್ ಪ್ರಶ್ನಿಸಿದರು.

ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದವರಿದ್ದಾರೆ. ಅವರಿಗೆ ಸ್ಮಾರ್ಟ್‌ಫೋನ್ ಇಲ್ಲ. ಅಲ್ಲಿಗೆ ಸರಿಯಾಗಿ ಇಂಟರ್‌ನೆಟ್ ಸಂಪರ್ಕ ಇರುವುದಿಲ್ಲ. ಹೀಗಾದರೆ ಕ್ಯಾಶ್‌ಲೆಸ್‌ಗೆ ಅನಕ್ಷರಸ್ಥರು ಒಗ್ಗಿಕೊಳ್ಳುವುದಾದರೂ ಹೇಗೆ?. ವಿದೇಶಕ್ಕೆ ಶಿಕ್ಷಣ ಬಯಸಿ ಹೋಗುತ್ತಿದ್ದ ವಿದ್ಯಾರ್ಥಗಳ ಸಂಖ್ಯೆ ಈ ವರ್ಷ ಗಣನೀಯವಾಗಿ ಕ್ಷೀಣಿಸಿದೆ ಎಂದರು.

ನೋಟು ಅಮಾನ್ಯಗೊಳಿಸಿರುವುದು ಜನಸಾಮಾನ್ಯರ ಒಳಿತಿಗಲ್ಲ. ಕಾರ್ಪೊರೇಟ್‌ಗಳ ಒಳಿತಿಗಾಗಿಯಾಗಿದೆ. ಉಗ್ರರ ಹಾವಳಿ ದೇಶದಲ್ಲಿ ಇನ್ನೂ ನಿಂತಿಲ್ಲ. ನೋಟು ರದ್ದುಗೊಳಿಸಿದ ಎರಡನೆಯ ದಿನವೇ ಉಗ್ರರ ಬಳಿ 2,000 ರೂ. ಮುಖಬೆಲೆಯ ನೋಟುಗಳು ಇರುವುದು ಪತ್ತೆಯಾಗಿದೆ ಎಂದು ಡಿವೈಎಫ್‌ನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಮೋದಿ ಸರಕಾರ ಬಂದ ಬಳಿಕ ಲಕ್ಷಾಂತರ ಉದ್ಯೋಗಗಳು ಕಡಿತವಾಗಿದೆ. ಬೇರೆ ಬೇರೆ ರಾಜ್ಯದಿಂದ ದುಡಿಯಲು ಬಂದಿರುವ ಕಾರ್ಮಿಕರು, ಸ್ಥಳೀಯ ಬೀಡಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮವಾಗಿದ್ದು, ಇಂದು ಶೇ. 50 ರಷ್ಟು ಹಡಗುಗಳು ಸಮುದ್ರಕ್ಕೆ ಇಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಪೇಟಿಎಂಗಳಂತಹ ಆಧುನಿಕ ಉಪಕರಣ ಉಪಯೋಗಿಸಲು ಬರುವುದಿಲ್ಲ. ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅನಕ್ಷರಸ್ಥರು ಅಂತರ್ಜಾಲವನ್ನು ಬಳಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.

ನಕ್ಸಲರು ಆರು ವರ್ಷಗಳಿಂದ ನರಳುತ್ತಿದ್ದಾರೆಯೇ ಹೊರತು ನೋಟು ಅಭಾವದ ಬಳಿಕವಲ್ಲ. ನೋಟು ಅಮಾನ್ಯಗೊಳಿಸಿದ ವಿಚಾರವಾಗಿ ಅಭಿಪ್ರಾಯ ತಿಳಿಸಿದರೆ ದೇಶ ದ್ರೋಹಿ ಎಂಬ ಪಟ್ಟಿ ಕಟ್ಟಲಾಗುತ್ತಿದೆ ಎಂದು ಹೇಳಿದರು.

ನೋಟು ಅಮಾನ್ಯದ ಬಳಿಕ ನಗದು ರಹಿತ ಸಮಾಜ ನಿರ್ಮಾಣ ಮಾಡಲು ಕಡಿಮೆ ಪ್ರಮಾಣ ಹಣ ಬಿಡುಗಡೆ ಮಾಡಲಾಗಿದೆ. ಸರಿಯಾದ ಪ್ರಮಾಣದಲ್ಲಿ ಹಣದ ಸರಬರಾಜು ಆಗಿದ್ದರೆ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರಲಿಲ್ಲ. ಸಾರ್ವಜನಿಕರ ಹಣವನ್ನು ಸರಕಾರ ತನ್ನ ಕೈಯಲ್ಲಿ ಹಿಡಿಯುವುದು ಸರಿಯಲ್ಲ ಎಂದು ಮಂಗಳೂರು ವಿವಿ ಹಣಕಾಸು ವಿಭಾಗದ ಅಧಿಕಾರಿ ಡಾ. ಶ್ರೀಪತಿ ಕಲ್ಲೂರಾಯ ನುಡಿದರು.
ಯೆನೆಪೊಯ ಸಂಸ್ಥೆಯ ಹಣಕಾಸು ನಿರ್ದೇಶಕ ಫರ್ಹಾದ್ ಯೆನೆಪೊಯ ಅಧ್ಯಕ್ಷತೆ ವಹಿಸಿದ್ದರು.

 ಜೊಸೆಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲ ಡಾ. ಜೊಬಿ ಇ.ಸಿ. ಉಪಸ್ಥಿತರಿದ್ದರು.

ಜೀವನ್‌ರಾಜ್ ಕಾರ್ಯಕ್ರಮ ನಿರೂಪಿಸಿದರು. ರಿಹಾನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News