×
Ad

2020ಕ್ಕೆ ಬೆಂಗಳೂರು ವಿಶ್ವದ ಐಟಿ ರಾಜಧಾನಿ: ಶ್ರೀವತ್ಸ ಕೃಷ್ಣ

Update: 2017-01-17 22:18 IST

ಉಡುಪಿ, ಜ.17: ಅಮೆರಿಕದ ಸಿಲಿಕಾನ್ ವ್ಯಾಲಿಯನ್ನೂ ಹಿಂದಿಕ್ಕಿ 2020ರ ವೇಳೆಗೆ ಬೆಂಗಳೂರು ವಿಶ್ವದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಮೂಡಿಬರಲಿದೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಅಧ್ಯಕ್ಷ ಹಾಗೂ ಕರ್ನಾಟಕ ಸರಕಾರದ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ)ನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ‘ಡಿಜಿಟಲ್ ಇಂಡಿಯಾದ ಮಾರ್ಗ: ಬೆಂಗಳೂರಿನಿಂದ ಆರಂಭ’ ವಿಷಯದ ಕುರಿತು 34ನೇ ಟಿ.ಎ.ಪೈ ಸ್ಮಾರಕ ಉಪನ್ಯಾಸ ನೀಡಿ ಮಾತನಾಡುತಿದ್ದರು.
ಸುಮಾರು ಮೂರು ದಶಕಗಳ ಹಿಂದಿನವರೆಗೆ ಅಸ್ತಿತ್ವದಲ್ಲೇ ಇಲ್ಲದೇ ಹೋದ ಮಾಹಿತಿತಂತ್ರಜ್ಞಾನ (ಐಟಿ) ಉದ್ಯಮ, ಇಂದು ದೇಶದ ಒಟ್ಟು ಜಿಡಿಪಿಯ ಶೇ.10ನ್ನು ನೀಡುತ್ತಿದೆ. ದೇಶದ ರಫ್ತಿನ ಶೇ.25 ಕೇವಲ ಐಟಿಯದ್ದಾಗಿದ್ದರೆ, ವಿದೇಶಿ ಬಂಡವಾಳದ ಶೇ.8ರಷ್ಟು ಮಾಹಿತಿತಂತ್ರಜ್ಞಾನಕ್ಕೆ ಹೂಡಿಕೆಯಾಗುತ್ತಿದೆ ಎಂದರು.

 ಮುಂದಿನ ದಿನಗಳಲ್ಲಿ ಬೆಂಗಳೂರಿನ ಐಟಿ ಕ್ಷೇತ್ರ 20 ಲಕ್ಷ ನೇರ ಉದ್ಯೋಗವನ್ನು ನೀಡಿದರೆ, 50ರಿಂದ 60 ಲಕ್ಷದಷ್ಟು ಪೂರಕ ಉದ್ಯೋಗಗಳನ್ನು ಒದಗಿಸಲಿದೆ. ಇದರಿಂದಾಗುವ ರಫ್ತಿನ ಪ್ರಮಾಣ ನಾಲ್ಕು ಲಕ್ಷ ಕೋಟಿ ರೂ.ಗಳಿಗೆ ಏರಲಿದೆ. ಇದರರ್ಥ ಇಡೀ ದೇಶದ ಐಟಿ ಕ್ಷೇತ್ರದ ರಫ್ತಿನ ಶೇ.40ರಷ್ಟು ಭಾಗ ಬೆಂಗಳೂರು ಒಂದೇ ನಗರದಿಂದ ಬರಲಿದೆ ಎಂದವರು ವಿವರಿಸಿದರು.

 ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಬೆಂಗಳೂರು ರಾಜಧಾನಿಯಾಗಲಿದೆ. ಅದು ಭಾರತದ ಕಿರೀಟದ ವಜ್ರವಾಗಿ ಹೊಳೆಯಲಿದೆ. ಇಂದು ವಿಶ್ವ ಮಾರುಕಟ್ಟೆಯ 150 ಬಿಲಿಯನ್ ಡಾಲರ್ ವ್ಯವಹಾರದಲ್ಲಿ 108 ಬಿಲಿಯನ್ ಡಾಲರ್ ಇಲ್ಲಿಂದಲೇ ರಫ್ತಾಗುತ್ತಿದೆ ಎಂದ ಕೃಷ್ಣನ್, ಐಟಿ ಉದ್ಯಮ ಬೆಳೆಯಲು ರಾಜ್ಯ ಸರಕಾರದ ದೂರದೃಷ್ಟಿ ಯೋಜನೆಗಳನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು.

ಇಂದು ಸರಕಾರ ವಿದೇಶಿ ಕಂಪೆನಿಯೊಂದಕ್ಕೆ ರಾಜ್ಯದಲ್ಲಿ ಒಂದು ಎಕರೆ ಜಾಗವನ್ನು ನೀಡಲು ಕನಿಷ್ಠ ಒಂದು ಸಾವಿರ ಮಂದಿಗೆ ಉದ್ಯೋಗ ನೀಡುವ ಭರವಸೆ ನೀಡಬೇಕಾಗಿದೆ. ಈಗಲೂ ಆಂಧ್ರ ಮತ್ತು ತಮಿಳುನಾಡಿನ ಐಟಿ ಉದ್ಯಮದಲ್ಲಿರುವ ಉದ್ಯೋಗ ಹಾಗೂ ರಫ್ತಿನ ಪ್ರಮಾಣ ಕರ್ನಾಟಕದ ಅರ್ಧವನ್ನೂ ಮೀರುತ್ತಿಲ್ಲ ಎಂದವರು ಹೆಮ್ಮೆಯಿಂದ ಹೇಳಿಕೊಂಡರು.

ಈ ಮೂಲಕ ಈಗ ಬೆಂಗಳೂರು ಎಂಬುದು ಪ್ರಶ್ನಾತೀತವಾಗಿ ‘ಏಷ್ಯಾದ ಸಿಲಿಕಾನ್ ವ್ಯಾಲಿ’ ಎನಿಸಿಕೊಂಡಿದೆ. ಐಟಿ ಕ್ಷೇತ್ರದಲ್ಲಿ ಬೆಂಗಳೂರು ದಾಪುಗಾಲು ಹಾಕುತ್ತಿರುವುದನ್ನು ವಿವರಿಸಿದ ಕೃಷ್ಣನ್, 2014ರ ಡಿಸೆಂಬರ್‌ನಲ್ಲಿ ದೇಶದಲ್ಲೇ ಮೊತ್ತ ಮೊದಲನೆಯದಾಗಿ ಬೆಂಗಳೂರಿನಲ್ಲಿ ಉಚಿತ ವೈ-ಫೈ ಸೌಲಭ್ಯವನ್ನ ನೀಡಲಾಯಿತು ಎಂದರು.

ಬೆಂಗಳೂರಿನ ಹೊರವಲಯದಲ್ಲಿ ಅಂತಾರಾಷ್ಟ್ರೀಯ ಟೆಕ್ನಾಲಜಿ ರೋಡ್‌ಮ್ಯಾಪ್ ಫಾರ್ ಸೆಮಿಕಂಡಕ್ಟರ್ (ಐಟಿಆರ್‌ಎಸ್) ಸ್ಥಾಪನೆಗೆ 10 ಸಾವಿರ ಎಕರೆ ಜಾಗವನ್ನು ಒದಗಿಸಲಾಗಿದೆ. ಬೆಂಗಳೂರಿನಲ್ಲಿ 10,000 ಬಯೋಸಾಯನ್ಸ್ ವೃತ್ತಿಪರರಿದ್ದಾರೆ. ಇಷ್ಟೊಂದು ದೊಡ್ಡಸಂಖ್ಯೆಯ ವೃತ್ತಿಪರರು ವಿಶ್ವದ ಬೇರಾವುದೇ ನಗರಗಳಲ್ಲಿಲ್ಲ ಎಂದರು. ಬೆಂಗಳೂರಿನ ಹೊರವಲಯದಲ್ಲಿ ಅಂತಾರಾಷ್ಟ್ರೀಯ ಟೆಕ್ನಾಲಜಿ ರೋಡ್‌ಮ್ಯಾಪ್ ಫಾರ್ ಸೆಮಿಕಂಡಕ್ಟರ್ (ಐಟಿಆರ್‌ಎಸ್) ಸ್ಥಾಪನೆಗೆ 10 ಸಾವಿರ ಎಕರೆ ಜಾಗವನ್ನು ಒದಗಿಸಲಾಗಿದೆ. ಬೆಂಗಳೂರಿನಲ್ಲಿ 10,000 ಬಯೋಸಾಯನ್ಸ್ ವೃತ್ತಿಪರರಿದ್ದಾರೆ. ಇಷ್ಟೊಂದು ದೊಡ್ಡಸಂಖ್ಯೆಯ ವೃತ್ತಿಪರರು ವಿಶ್ವದ ಬೇರಾವುದೇ ನಗರಗಳಲ್ಲಿಲ್ಲ ಎಂದರು. ವಿಶ್ವದ ಎಲ್ಲಾ ಪ್ರಮುಖ ಐಟಿ ಕಂಪೆನಿಗಳ ಲೋಗೋಗಳು ಬೆಂಗಳೂರಿನಲ್ಲೇ ತಯಾರಿಸಲ್ಪಟ್ಟಿವೆ. ರಾಜ್ಯ ಸರಕಾರ ಅತ್ಯಂತ ದೊಡ್ಡ ಡಾಟಾ ವಿಶ್ಲೇಷಕ ಕಂಪೆನಿ ಜಿಇಯ ಅತ್ಯಂತ ದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್ ಎಂಡ್ ಡಿ)ವನ್ನು ಬೆಂಗಳೂರಿನಲ್ಲಿ ತೆರೆಯಲು ಒಪ್ಪಂದ ಮಾಡಿಕೊಂಡಿದೆ ಎಂದರು.

ಕರ್ನಾಟಕ ಸರಕಾರ ಇ-ಆಡಳಿತದಲ್ಲಿ ದೇಶದ ಮುಂಚೂಣಿಯ ರಾಜ್ಯವಾಗಿದೆ. ಈಗ ರಾಜ್ಯ ಸರಕಾರದ್ದೇ ಆದ ‘ಮೊಬೈಲ್-ಓನ್’ ಆ್ಯಪ್‌ನ್ನು ಸರಕಾರ ಪ್ರಾರಂಭಿಸಿದೆ. ಇದರಿಂದ ಸರಕಾರದ ಹೆಚ್ಚಿನೆಲ್ಲಾ ಇಲಾಖೆಗಳ ಯೋಜನೆಗಳನ್ನು, ಬಹುದ್ದೇಶಗಳಿಗಾಗಿ ಬಳಸಬಹುದು ಎಂದರು.

 ಶೀಘ್ರವೇ ಉದ್ಘಾಟನೆಗೊಳ್ಳುವ ಇಂಡಿಯನ್ ಮೀಡಿಯಾ ಎಂಡ್ ಎಂಟರ್‌ಟೈನ್‌ಮೆಂಟ್ ಸಿಟಿ ಹಾಗೂ ಸಾಯನ್ಸ್ ಗ್ಯಾಲರಿ ಮೂಲಕ ಬೆಂಗಳೂರೂ ದೇಶದ ಮನರಂಜನಾ ನಗರವಾಗಿ ಗುರುತಿಸಿಕೊಳ್ಳಲಿದೆ. ಇದು ಡಬ್ಲಿನ್, ನ್ಯೂಯಾರ್ಕ್ ಹಾಗೂ ಮೆಲ್ಬೋರ್ನ್ ನಗರಗಳಲ್ಲಿ ಮಾತ್ರವಿದೆ ಎಂದವರು ಹೇಳಿದರು.

ಮಣಿಪಾಲ ವಿವಿ ಪ್ರೊ ಚಾನ್ಸಲರ್ ಹಾಗೂ ಟ್ಯಾಪ್ಮಿ ಆಡಳಿತ ಮಂಡಳಿಯ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಟ್ಯಾಪ್ಮಿಯ ನಿರ್ದೇಶಕ ಡಾ.ಗುರುರಾಜ್ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News