ಭಾರತೀಯರ ಬ್ರಿಟನ್ ವೀಸಾ ಸಮಸ್ಯೆ- ಶೀಘ್ರ ಪರಿಹಾರಕ್ಕೆ ಕೋರಿಕೆ
ಲಂಡನ್, ಜ.17: ಬ್ರಿಟನ್‌ನಲ್ಲಿ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತವು, ವೀಸಾ ವಿವಾದವನ್ನು ತಕ್ಷಣ ಪರಿಹರಿಸಿ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಕೇಳಿಕೊಂಡಿದೆ.
ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್‌ನ ಇತರ ದೇಶಗಳಿಗೆ ಹೋಲಿಸಿದರೆ ಬ್ರಿಟನ್‌ಗೆ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಬ್ರಿಟನ್‌ನಲ್ಲಿ ಭಾರತದ ರಾಯಭಾರಿಯಾಗಿರುವ ವೈ.ಕೆ.ಸಿನ್ಹ ಕಳವಳ ಸೂಚಿಸಿದರು.
2010ರಲ್ಲಿ ಬ್ರಿಟನ್‌ಗೆ ವ್ಯಾಸಂಗಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ40 ಸಾವಿರ ಆಗಿದ್ದರೆ ಅದು ಈಗ 19 ಸಾವಿರಕ್ಕೆ ಬಂದು ನಿಂತಿದೆ. ಅಮೆರಿಕಾಕ್ಕೆ ವ್ಯಾಸಂಗಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2010ರಲ್ಲಿ 1,04,000 ಆಗಿದ್ದರೆ, ಈಗ 1,66,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕಾಕ್ಕೆ ತೆರಳಿದ್ದಾರೆ ಎಂದವರು ತಿಳಿಸಿದರು.
ಲಂಡನ್‌ನ ಇಂಡಿಯಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿನ್ಹ ಮಾತನಾಡಿದರು. ಆಸ್ಟ್ರೇಲಿಯಾಕ್ಕೆ 2010ರಲ್ಲಿ 19 ಸಾವಿರ ವಿದ್ಯಾರ್ಥಿಗಳು ತೆರಳಿದ್ದರೆ, ಪ್ರಸ್ತುತ 40 ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಹಿಂದೆ ಭಾರತೀಯ ವಿದ್ಯಾರ್ಥಿಗಳ ಪ್ರಥಮ ಆದ್ಯತೆ ಬ್ರಿಟನ್ ಆಗಿತ್ತು. ಇದರರ್ಥ ಈಗ ಅಲ್ಲೇನೋ ಸಮಸ್ಯೆಯಾಗಿದೆ ಎಂದವರು ಹೇಳಿದರು.
ಭಾರತೀಯ ವಿದ್ಯಾರ್ಥಿಗಳು ಹೋದಲ್ಲೆಲ್ಲಾ ಉತ್ತಮ ಸಾಧನೆ ತೋರುತ್ತಾರೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನತ್ತ ವಿದ್ಯಾರ್ಥಿಗಳು ಮತ್ತೆ ಆಕರ್ಷಿತರಾಗುವಂತೆ ಮಾಡಬೇಕಿದೆ. ಉಭಯ ದೇಶದ ಸರಕಾರಗಳು ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದವರು ಅಭಿಪ್ರಾಯಪಟ್ಟರು. ಬ್ರಿಟನ್‌ನತ್ತ ದಕ್ಷ ವೃತ್ತಿನಿರತರು ವಲಸೆ ಹೋಗುವುದು ಕಳವಳದ ವಿಷಯವಾಗಿದೆ . ಐಟಿ ಕ್ಷೇತ್ರದಲ್ಲಿ ಭಾರತದ ದಕ್ಷ ವೃತ್ತಿನಿರತರಿಗೆ ಜಾಗತಿಕವಾಗಿ ಪ್ರತಿಷ್ಠಿತ ಸ್ಥಾನವಿದೆ. ನಮ್ಮ ಐಟಿ ವೃತ್ತಿನಿರತರು ವಿದೇಶಕ್ಕೆ ಹೋಗಿ, ಅಲ್ಲಿ ಕಾರ್ಯ ನಿರ್ವಹಿಸಿ ಭಾರತಕ್ಕೆ ಮರಳುವಂತಾಗಬೇಕು. ಇದು ಜಾಗತಿಕ ಅರ್ಥವ್ಯವಸ್ಥೆಯ ಜೊತೆಗೆ ದೇಶೀಯ ಅರ್ಥವ್ಯವಸ್ಥೆಯ ಅಭಿವೃದ್ಧಿಗೂ ನೆರವಾಗುತ್ತದೆ ಎಂದರು.
ಕಳೆದ ನವೆಂಬರ್‌ನಲ್ಲಿ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಭಾರತಕ್ಕೆ ಭೇಟಿ ನೀಡಿರುವುದು ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧ ವೃದ್ಧಿಯ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ . ಬ್ರಿಟನ್‌ನೊಂದಿಗೆ ನಮ್ಮ ವ್ಯಾಪಾರ ಸಂಬಂಧ ಉತ್ತಮವಾಗಿದೆ. ವಾರ್ಷಿಕ 14 ಬಿಲಿಯನ್ ಡಾಲರ್ ಮೊತ್ತದ ಸರಕು ವ್ಯಾಪಾರ, 5 ಬಿಲಿಯನ್ ಡಾಲರ್ ಮೊತ್ತದ ಸೇವಾ ವ್ಯವಹಾರ ಉಭಯ ದೇಶಗಳ ನಡುವೆ ಸಾಗುತ್ತಿದೆ. ಅಲ್ಲದೆ ಬ್ರಿಟನ್ ಜಿ20 ರಾಷ್ಟ್ರಗಳ ಪೈಕಿ ಭಾರತದಲ್ಲಿ ಗರಿಷ್ಠ ಹೂಡಿಕೆ ಮಾಡಿರುವ ರಾಷ್ಟ್ರವಾಗಿದೆ. ಬ್ರಿಟನ್‌ನಲ್ಲಿ ಭಾರತದ ಸುಮಾರು 800 ಭಾರತದ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಸರಕಾರದ ಖಜಾನೆಗೆ ಸುಮಾರು 1 ಬಿಲಿಯನ್‌ಗಿಂತಲೂ ಹೆಚ್ಚಿನ ಆದಾಯ ತೆರಿಗೆ ರೂಪದಲ್ಲಿ ಸಲ್ಲುತ್ತಿದೆ. ಅಲ್ಲದೆ ಸುಮಾರು 1 ಲಕ್ಷ ಜನರಿಗೆ ಉದ್ಯೋಗವಕಾಶ ನೀಡಲಾಗಿದೆ ಎಂದು ಸಿನ್ಹಾ ವಿವರಿಸಿದರು.