×
Ad

ರಸ್ತೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ

Update: 2017-01-17 22:35 IST

ಮಂಗಳೂರು, ಜ. 17: ಬಜಾಲ್ ವಾರ್ಡಿನ ಒಳರಸ್ತೆಗಳಾದ ಪಾಂಡಲ್ ಗುಡ್ಡೆ, ಶಾಂತಿನಗರ, ಕಲ್ಲಕಟ್ಟೆ ಮುಂತಾದ ಕೆಟ್ಟುಹೋದ ರಸ್ತೆಗಳನ್ನು ಸರಿಪಡಿಸಲು ಒತ್ತಾಯಿಸಿ ಇಂದು ಬಜಾಲ್ ಕಲ್ಲಕಟ್ಟೆ ಬಳಿ ಪ್ರತಿಭಟನೆ ನಡೆಯಿತು.

 ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಂಗಳೂರು ನಗರ ಪಾಲಿಕೆಯ ಎಲ್ಲಾ 60 ವಾರ್ಡ್‌ಗಳಿಗೆ ಹೋಲಿಸಿದರೆ ಬಜಾಲ್ ತೀರಾ ಹಿಂದುಳಿದ ಪ್ರದೇಶವಾಗಿದೆ. ಪಾಲಿಕೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಗೋಜಿಗೆ ಈವರೆಗೂ ಹೋಗಿಲ್ಲ. ಕಳೆದ ಹಲವು ವರುಷಗಳಿಂದ ಈ ಸಮಸ್ಯೆ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಈ ಭಾಗದ ಜನರ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ಸಮಸ್ಯೆ ಆಲಿಸಲು ಇಲ್ಲಿನ ಕಾರ್ಪೊರೇಟರ್ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸಮಸ್ಯೆ ಕೂಡಲೇ ಇತ್ಯರ್ಥವಾಗದಿದ್ದಲ್ಲಿ ಪಾಲಿಕೆ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಡಿವೈಎಫ್‌ಐ ನಗರ ದಕ್ಷಿಣ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಅನ್ಸಾರ್ ಫೈಸಲ್ನಗರ, ಪ್ರೆಮನಾಥ್ ಜಲ್ಲಿಗುಡ್ಡೆ, ಸೀತರಾಮ್ ನಾಯಕ್, ಸುರೇಶ್ ಬಜಾಲ್ ಮಾತನಾಡಿದರು. ಪ್ರತಿಭಟನೆ ನೇತೃತ್ವವನ್ನು ಡಿವೈಎಫ್‌ಐ ಜಲ್ಲಿಗುಡ್ಡೆ ಘಟಕದ ಅಧ್ಯಕ್ಷ ಬಶೀರ್ ಜಲ್ಲಿಗುಡ್ಡೆ, ಕಾರ್ಯದರ್ಶಿ ನರೇಶ್ ಜಲ್ಲಿಗುಡ್ಡೆ, ಮುಸ್ತಫಾ ಕಲ್ಲಕಟ್ಟೆ, ಇಕ್ಬಾಲ್ ಕಲ್ಲಕಟ್ಟೆ ಉಮರಬ್ಬ, ಮಯ್ಯದ್ದಿ ಮುಂತಾದವರು ವಹಿಸಿದ್ದರು.

ಸಿದ್ದಿಕ್ ಫೈಸಲ್ನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಟನೆ ನಂತರ ಮೇಯರ್ ಹಾಗು ಆಯುಕ್ತರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.ಮನವಿ ಸ್ವೀಕರಿಸಿ ಮಾತನಾಡಿದ ಮೇಯರ್, ಬುಧವಾರ ಸಂಜೆ ಎಂಜಿನಿಯರ್ ಸಮ್ಮುಖದಲ್ಲಿ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News