ಅಪ್ಪನ ಜೊತೆಗೇ ಮುಂದೆ ಸಾಗುತ್ತೇವೆ: ಅಖಿಲೇಶ್
ಲಕ್ನೊ, ಜ.17: ಪಕ್ಷದ ಹಿರಿಯ ಮುಖಂಡ, ತನ್ನ ತಂದೆ ಮುಲಾಯಂ ಸಿಂಗ್ ಅವರೊಂದಿಗಿನ ತನ್ನ ಸಂಬಂಧ ಎಂದಿಗೂ ಮುರಿಯಲಾಗದು ಎಂದು ಹೇಳಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮುಂಬರುವ ದಿನಗಳಲ್ಲಿ ‘ನೇತಾಜಿ’ಯವರನ್ನು ಜೊತೆಯಲ್ಲಿರಿಸಿಕೊಂಡೇ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಸಮಾಜವಾದಿ ಪಕ್ಷವನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವುದೇ ತನ್ನ ಪ್ರಥಮ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಸರ್ವರನ್ನೂ ಜೊತೆಯಲ್ಲೇ ಕರೆದೊಯ್ಯುವುದಾಗಿ ಅವರು ತಿಳಿಸಿದರು. ನನಗೆ ಸೈಕಲ್ ಚಿಹ್ನೆ ದೊರೆಯುತ್ತದೆ ಎಂಬ ವಿಶ್ವಾಸವಿತ್ತು. ಇದೀಗ ಸಮಯ ಕಡಿಮೆಯಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಬೇಕಿದೆ. ಇದೊಂದು ದೊಡ್ಡ ಜವಾಬ್ದಾರಿಯಾಗಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಜವಾಬ್ದಾರಿ ನಿಭಾಯಿಸ ಲಾಗುವುದು ಎಂದು ಅಖಿಲೇಶ್ ತಿಳಿಸಿದರು. ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ವೇಳೆ ನಿವಾಸದ ಹೊರಗೆ ಸೇರಿದ್ದ ಅವರ ಬೆಂಬಲಿಗರು- ಸಬ್ ಬೋಲೇ ದಿಲ್ ಸೆ, ಅಖಿಲೇಶ್ ಭೈಯ್ಯ ಫಿರ್‌ಸೆ ( ಎಲ್ಲರೂ ಹೃದಯಾಂತರಾಳದಿಂದ ಹೇಳಿ- ಸೋದರ ಅಖಿಲೇಶ್ ಮತ್ತೆ ಗೆಲ್ಲಲಿ) ಎಂಬ ಘೋಷಣೆ ಕೂಗುತ್ತಿದ್ದರು. ಚುನಾವಣಾ ಆಯೋಗವು ತಮ್ಮ ಬಣಕ್ಕೆ ಸೈಕಲ್ ಚಿಹ್ನೆ ನೀಡಿದ ಬಳಿಕ ಅಖಿಲೇಶ್ ಸೋಮವಾರ ರಾತ್ರಿ ತನ್ನ ತಂದೆ ಮುಲಾಯಂಸಿಂಗ್ ಅವರನ್ನು ಭೇಟಿಯಾಗಿದ್ದರು. ಈ ಬಳಿಕ ಮೂರು ಹಳೆಯ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಾಕಿದ್ದರು. ಅದರಲ್ಲಿ ಮುಲಾಯಂರೊಂದಿಗಿರುವ ಒಂದು ಫೋಟೋ ಇತ್ತು. ಉಳಿದ ಎರಡೂ ಫೋಟೋಗಳು ಜನವರಿ 1ರಂದು ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯದ್ದು. ಈ ಫೋಟೋಗಳ ಜೊತೆಗೆ- ಸೈಕಲ್ ಚಲ್ತೀ ಜಾಯೇಗಿ, ಆಗೇ ಬಡ್ತೆ ಜಾಯೇಗಿ (ಸೈಕಲ್ ಚಲಿಸುತ್ತಲೇ ಇರುತ್ತದೆ, ಮುಂದೆ ಸಾಗುತ್ತಲೇ ಇರುತ್ತದೆ) ಎಂಬ ಸಂದೇಶವನ್ನು ಕೂಡಾ ಪೋಸ್ಟ್ ಮಾಡಿದ್ದರು. ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಸಚಿವರು ಅಖಿಲೇಶ್ ನಿವಾಸಕ್ಕೆ ದೌಡಾಯಿಸಿ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಪಕ್ಷದ ಕಚೇರಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು ಹೆಚ್ಚಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಅಖಿಲೇಶ್ ನಿವಾಸದ ಕೂಗಳತೆಯಲ್ಲಿರುವ ಮುಲಾಯಂ ಸಿಂಗ್ ಅವರ ಬಂಗಲೆಯಲ್ಲಿ ಈಗ ಹೆಚ್ಚಿನ ಚಟುವಟಿಕೆ ಕಂಡುಬರುತ್ತಿಲ್ಲ. ಮುಲಾಯಂ ಸೋದರ ಶಿವಪಾಲ್ ಯಾದವ್, ಅಂಬಿಕಾ ಚೌಧರಿ ಮುಂತಾದವರು ಮುಲಾಯಂ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.