ಅಂಗನವಾಡಿಯಲ್ಲಿ ದಲಿತ ಮಕ್ಕಳ ಬಗ್ಗೆ ಅಸ್ಪರ್ಶತೆ ಸಹಾಯಕಿಯನ್ನು ವಜಾ ಗೊಳಿಸಲು ದಲಿತರ ಆಗ್ರಹ
ಪುತ್ತೂರು , ಜ.17 : ಪುತ್ತೂರು ನಗರದ ನೆಲ್ಲಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ದಲಿತರ ಮಕ್ಕಳ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಂಗಳವಾರ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಘಟನೆಯ ಕುರಿತು ವಿಚಾರಣೆ ನಡೆಸಿದ ಮತ್ತು ಇದೇ ವೇಳೆ ಅಲ್ಲಿ ಸೇರಿದ್ದ ಬ್ರಹ್ಮನಗರ ದಲಿತ ಕಾಲೋನಿಯ ನಿವಾಸಿಗಳು ದಲಿತ ಮಕ್ಕಳ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿರುವ ಅಂಗನವಾಡಿ ಸಹಾಯಕಿಯನ್ನು ವಜಾಗೊಳಿಸದಿದ್ದರೆ ನಮ್ಮ ಮಕ್ಕಳನ್ನು ಇನ್ನು ಮುಂದೆ ಅಂಗವಾಡಿಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದು ಗೊಂದಲ ಸೃಷ್ಟಿಸಿದ ಘಟನೆ ನಡೆಯಿತು.
ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶಾಂತಿ ಹೆಗಡೆ ಮತ್ತು ಸ್ಥಳೀಯ ಅಂಗನವಾಡಿ ಸಲಹಾ ಸಮಿತಿಯ ಅಧ್ಯಕ್ಷರಾದ ಸ್ಥಳೀಯ ನಗರಸಭಾ ಸದಸ್ಯ ಶಕ್ತಿಸಿನ್ಹಾ , ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್, ಅಸಾಹಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಅವರು ಮಂಗಳವಾರ ಅಂಗನವಾಡಿ ಕೇಂದ್ರಕ್ಕೆ ತೆರಳಿ ಆರೋಪಗಳ ಕುರಿತು ವಿಚಾರಣೆ ನಡೆಸಿದ್ದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ್ದ ಬ್ರಹ್ಮನಗರ ದಲಿತ ಕಾಲೋನಿಯ ಮಕ್ಕಳ ಪೋಷಕರು ನಮ್ಮ ದಲಿತರ ಮಕ್ಕಳನ್ನು ಇಲ್ಲಿನ ಅಂಗನವಾಡಿ ಸಹಾಯಕಿ ವಿಜಯಲಕ್ಷ್ಮಿ ಅವರು ತಾರತಮ್ಯ ನೀತಿಯಿಂದ ನೋಡುತ್ತಿದ್ದಾರೆ. ಉಳಿದ ಮಕ್ಕಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದು ಲೋಟ ಹಾಲು ನೀಡಿದರೆ ನಮ್ಮ ಮಕ್ಕಳಿಗೆ ಒಂದೇ ಲೋಟದಲ್ಲಿ ಅರ್ಧ ಲೋಟದಂತೆ ಹಾಲು ನೀಡಲಾಗುತ್ತಿದೆ. ತೊಳೆಯದ ಗ್ಲಾಸು ,ಬಟ್ಟಲಿನಲ್ಲಿ ಅನ್ನ ,ಹಾಲು ನೀಡಲಾಗುತ್ತಿದೆ. ನಮ್ಮ ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ನೆಲದಲ್ಲಿ ಕುಳ್ಳಿರಿಸಿ ಉಳಿದ ಮಕ್ಕಳನ್ನು ಚಾಪೆಯಲ್ಲಿ ಕೂರಿಸಲಾಗುತ್ತಿದೆ. ಶೌಚಾಲಯದಲ್ಲಿ ದಲಿತ ಮಕ್ಕಳಿಗೆ ಶೌಚಕ್ಕೆ ಅವಕಾಶ ನೀಡದೆ ಹೊರಗಡೆ ಕಳುಹಿಸಲಾಗುತ್ತಿದೆ. ಶುಚಿಗೊಳಿಸುವ ಬದಲಾಗಿ ಅವರನ್ನು ಅಂಗನವಾಡಿಯಿಂದ ಹೊರಗಡೆ ನಿಲ್ಲಿಸಲಾಗುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದರು.
ದಲಿತ ಮಕ್ಕಳ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿರುವ ಅಂಗನವಾಡಿ ಸಹಾಯಕಿಯನ್ನು ಇಂದೇ ವಜಾ ಮಾಡದಿದ್ದರೆ ಈಗಲೇ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ ಎಂದು ಪಟ್ಟು ಹಿಡಿದರು.
ಅಂಗನವಾಡಿ ಸಹಾಯಕಿಯನ್ನು ಈಗಲೇ ವಜಾ ಗೊಳಿಸಬೇಕು ಇಲ್ಲವೆ ತಾವು ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದ ದಲಿತ ಕಾಲೋನಿಯ ನಿವಾಸಿಗಳು ಮಕ್ಕಳನ್ನು ಕರೆದೊಯ್ಯಲು ಮುಂದಾದಾಗ ಅವರನ್ನು ಸಮಾಧಾನಿಸಲು ಮುಂದಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ಅವರು ತಾನು ಆರೋಪದ ಕುರಿತು ಪರಿಶೀಲನೆಗಾಗಿಯೇ ಬಂದಿದ್ದು, ಇಲ್ಲಿನ ಸಹಾಯಕಿ ನಾಳೆಯಿಂದ ಸೇವೆಗೆ ಇರುವುದಿಲ್ಲ. ಮೇಲಾಧಿಕಾರಿಗಳ ಜೊತೆ ಮಾತನಾಡಿ ಇಲ್ಲಿಗೆ ಬದಲಿ ವ್ಯವಸ್ಥೆ ಮಾಡುತ್ತೇನೆ. ಇಂದು ಸಂಜೆ 4 ಗಂಟೆ ತನಕವೂ ತಾನೇ ಇಲ್ಲಿ ಇರುತ್ತೇವೆ. ವಠಾರದ ಎಲ್ಲಾ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ, ಇನ್ನು ಮುಂದೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಅವರು ದಲಿತ ಮಕ್ಕಳ ಬಗ್ಗೆ ತಾರತಮ್ಯ ನೀತಿ ಅನುಸರಿಸುವ ಮೂಲಕ ಚ್ಯುತಿ ತರುವ ಸಹಾಯಕಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಈ ಭರವಸೆಯ ಹಿನ್ನಲೆಯಲ್ಲಿ ದಲಿತ ಕಾಲೋನಿಯ ನಿವಾಸಿಗಳು ತಮ್ಮ ಪಟ್ಟು ಸಡಿಲಿಸಿದರು.
ಅಂಗನವಾಡಿ ಮೇಲ್ವಿಚಾರಕಿ ದಮಯಂತಿ, ಬ್ರಹ್ಮನಗರ ನಿವಾಸಿಗಳಾದ ಶೇಖರ್ ಪಿ. ಶೇಖರ್, ರೂಪಿಣಿ, ಪ್ರಕಾಶ್, ವಿನುತಾ, ಮೋಹಿನಿ,ಶೋಭಾ, ಲತಾ,ಗುರುರಾಜ್,ಲಕ್ಷ್ಮೀ, ಸುನಿಲ್,ಮಹೇಶ್, ಸುದರ್ಶನ್, ಮನೋಹರ್, ರಾಕೇಶ್, ಲಕ್ಷ್ಮಣ ಮತ್ತಿತರರು ಅಂಗನವಾಡಿ ಸಹಾಯಕಿಯ ತಾರತಮ್ಯ ಧೋರಣೆಯ ವಿರುದ್ಧ ಧ್ವನಿ ಎತ್ತಿದರು.
ಅಂಗನವಾಡಿ ಕೇಂದ್ರದಲ್ಲಿ ಗೊಂದಲದ ವಾತಾರಣ ನಿರ್ಮಾಣವಾದ ಹಿನ್ನಲೆಯಲ್ಲಿ ಪುತ್ತೂರು ನಗರ ಠಾಣೆಯ ಎಸ್‌ಐ ಓಮನಾ ಮತ್ತು ಸಿಬ್ಬಂದಿ ಆಗಮಿಸಿದ್ದರು.