ಈಗ ಕುಮಾರನ ವಿಶ್ವಾಸ ಬಿಜೆಪಿಯತ್ತ !

Update: 2017-01-18 05:17 GMT

ಹೊಸದಿಲ್ಲಿ, ಜ.18: ಆಮ್ ಆದ್ಮಿ ಪಾರ್ಟಿ ನಾಯಕ ಕುಮಾರ್ ಬಿಸ್ವಾಸ್ ಅವರು ಬಿಜೆಪಿ ಸೇರಲಿದ್ದಾರೆಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಮೂಲಗಳ ಪ್ರಕಾರ ಅವರು ಈಗಾಗಲೇ ಬಿಜೆಪಿ ಜತೆ ಮಾತುಕತೆ ನಡೆಸುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಅವರು ಬಿಜೆಪಿ ಸೇರಿದಲ್ಲಿ ಅವರನ್ನು ಉತ್ತರ ಪ್ರದೇಶದ ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕೆನ್ನುವ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ ಎಂದು ಹೇಳಲಾಗಿದೆ.

ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಹೆಚ್ಚಿನ ವಿಳಂಬದ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ. ಕುಮಾರ್ ಬಿಸ್ವಾಸ್ ಅವರು ಬಿಜೆಪಿ ಸೇರಿದ್ದಾರೆನ್ನುವ ಅಧಿಕೃತ ಘೋಷಣೆ ಹೊರಡಿಸುವ ಮುನ್ನ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗಲಿದ್ದಾರೆ. ಅವರನ್ನು ಲಕ್ನೋದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಗುವುದೆಂದು ಹೇಳಲಾಗಿದೆ.

ಈ ಹಿಂದೆ ಎಎಪಿಯಿಂದ ಅಮೇಠಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಬಿಜೆಪಿಯ ಸ್ಮತಿ ಇರಾನಿ ವಿರುದ್ಧ ಸ್ಪರ್ಧಿಸಿದ್ದ ವಿಶ್ವಾಸ್ ಈ ಬಾರಿ ಘಾಝಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ, ಉತ್ತರ ಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಂಕಜ್ ಸಿಂಗ್ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದರಿಂದ ಈ ನಿಟ್ಟಿನಲ್ಲಿ ಬಿಜೆಪಿ ಹೆಚ್ಚಿನ ಯೋಚನೆ ಮಾಡುತ್ತಿದೆ. ಈ ಕ್ಷೇತ್ರವನ್ನು 2012ರ ಚುನಾವಣೆಯಲ್ಲಿ ಬಿಎಸ್ ಪಿ ಟಿಕೆಟ್ ನಿಂದ ಗೆದ್ದಿದ್ದ ಅಮರ್ ಪಾಲ್ ಶರ್ಮ ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ತರುವಾಯ ಪಂಕಜ್ ಸಿಂಗ್ ಅವರನ್ನು ನೊಯ್ಡಾ ಅಥವಾ ಚಂದೌಲಿ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯೂ ಇದೆಯೆನ್ನಲಾಗಿದೆ.

ಎಎಪಿಯಲ್ಲಿ ಈಗ ಪಂಕಜ್ ಅವರಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡದ ಹಿನ್ನೆಲೆಯಲ್ಲಿ ವಿಶ್ವಾಸ್ ಅವರು ಕಳೆದ ಕೆಲ ತಿಂಗಳುಗಳಿಂದ ಬಿಜೆಪಿ ನಾಯಕರ ಜತೆ ಕಾಣಿಸಲಾರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News