ಪುಚ್ಚಮೊಗರಿನಲ್ಲಿ ಚಿರತೆ ಹಾವಳಿ: ಸ್ಥಳೀಯರಲ್ಲಿ ಭೀತಿ
ಮೂಡುಬಿದಿರೆ, ಜ.18: ಹೊಸಬೆಟ್ಟು ಗ್ರಾಪಂ ವ್ಯಾಪ್ತಿಯ ಪುಚ್ಚಮೊಗರು ಶಾಂತಿರಾಜ ಕಾಲನಿ ಬಳಿಯಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಪರಿಸರದ ಜನರು ಭಯಭೀತರಾಗಿರುವುದರಿಂದ ಶಾಸಕ ಕೆ.ಅಭಯಚಂದ್ರ ಜೈನ್ ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜೈನ್, ಕಳೆದ ಎರಡು ದಿನಗಳಿಂದ ಶಾಂತಿರಾಜ ಕಾಲನಿ ಬಳಿ ಚಿರತೆ ಅಡ್ಡಾಡುತ್ತಿದೆ. ನಿನ್ನೆ ರಾತ್ರಿಯೂ ಚಿರತೆ ಕಾಣಿಸಿಕೊಂಡಿರುವುದರಿಂದ ಪರಿಸರದ ಜನರು ಆತಂಕಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಅರಣ್ಯಾಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಚಿರತೆ ಹಿಡಿಯಲು ಬೋನನ್ನು ಇಟ್ಟಿದ್ದಾರೆ. ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯಲಾಗುವುದು. ಆದ್ದರಿಂದ ಯಾರೂ ಹೆದರಬೇಕಾಗಿಲ್ಲ ಎಂದು ಜನತೆಗೆ ಧೈರ್ಯ ತುಂಬಿದರು.
ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್ ಸುಬ್ರಹ್ಮಣ್ಯ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಎಂಪಿಎಂಸಿ ಸದಸ್ಯ ಶ್ರೀನಿವಾಸ, ಉಪ ವಲಯಾರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ, ಸಿಬ್ಬಂದಿಯಾದ ಅಯ್ಯಣ್ಣ, ನಾರಾಯಣ, ಚಂದ್ರಯ್ಯ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.