ಸುಳ್ಯದಲ್ಲಿ ಸಚಿವ ಆಂಜನೇಯರಿಂದ ನೂತನ ಸಮಾಜ ಕಲ್ಯಾಣ ಇಲಾಖಾ ಕಛೇರಿಯ ಉದ್ಘಾಟನೆ
ಸುಳ್ಯ , ಜ.18 : ರಾಜ್ಯ ಸರಕಾರ ದುರ್ಬಲ ವರ್ಗದವರ ಏಳಿಗೆಗೆ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ರಾಜ್ಯ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ.
ಸುಳ್ಯದಲ್ಲಿ ನಿರ್ಮಾಣಗೊಂಡಿರುವ ನೂತನ ತಾಲೂಕು ಸಮಾಜ ಕಲ್ಯಾಣ ಇಲಾಖಾ ಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಗಡಿ ಪ್ರದೇಶ ಕಾಮಗಾರಿ ಹಾಗೂ ತಾಲೂಕಿನ ವಿವಿಧ ಕಡೆ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಯಿತು.
ಬಡವರ ಪರವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದಾಗಿ ದುರ್ಬಲರ ಕಲ್ಯಾಣ ಆಗುತ್ತಿದೆ ಎಂದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಇಲಾಖೆಯ ಎಲ್ಲ ವಿವರಗಳನ್ನು ಪಾರದರ್ಶಕವಾಗಿ ತಿಳಿಸುವ ದೃಷ್ಟಿಯಿಂದ ವೆಬ್ ಸೈಟ್ ಅನಾವರಣಗೊಂಡಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ರಮಾನಾಥ ರೈ ಮಾತನಾಡಿ, ಅಭಿವೃದ್ಧಿ ಪರ ಚಿಂತನೆ, ಸಮಾಜ ಪರ ಕಾಳಜಿ ಇದ್ದರೆ ಮಾತ್ರ ರಾಜ್ಯ ಅಭಿವೃದ್ಧಿಯಾಗುತ್ತದೆ. ದುರ್ಬಲರ ಪರವಾಗಿ ಮಾತನಾಡುವಾಗ ಬಲಿಷ್ಠರ ವಿರೋಧ ಎದುರಿಸಬೇಕಾಗುತ್ತದೆ. ಆದರೂ ಸಿದ್ದರಾಮಯ್ಯ ಸರಕಾರ ಅಹಿಂದ ಪರ ಕಾರ್ಯಕ್ರಮಗಳನ್ನು ನೀಡಿ ಬಡವರ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯತ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದಾ ಎಸ್. ರೈ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಮೇನಾಲ, ಉಬರಡ್ಕ ಮಿತ್ತೂರು ಗ್ರಾ.ಪಂ. ಅಧ್ಯಕ್ಷ ಹರೀಶ್ ರೈ ಉಬರಡ್ಕ, ರಾಜೀವ್ ಗಾಂಧಿ ವಿ.ವಿ. ಸಿಂಡಿಕೇಟ್ ಸದಸ್ಯ ಡಾ.ರಘು, ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಸಂತೋಷ್ ಕುಮಾರ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅಧಿಕಾರಿ ಡಾ.ನಾಗರಾಜಪ್ಪ, ಸಹಾಯಕ ಕಮಿಷನರ್ ರಘುನಂದನ ಮೂರ್ತಿ ಉಪಸ್ಥಿತರಿದ್ದರು.
ಪ್ರಭಾರ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲ್ ಸ್ವಾಗತಿಸಿದರು , ಅಚ್ಚ್ಯುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.