×
Ad

ಬ್ರಿಟಿಷ್ ಸ್ಟಾರ್ ಬಾಕ್ಸರ್ ಆಂಥನಿ ಜೋಶುಆರಿಂದ ದುಬೈ ಮಸೀದಿಯಲ್ಲಿ ನಮಾಜ್ಹ್

Update: 2017-01-18 18:10 IST

ದುಬೈ,ಜ.18: ಬ್ರಿಟನ್ನಿನ ಸ್ಟಾರ್ ಬಾಕ್ಸರ್ ಹಾಗೂ ಒಲಿಂಪಿಯನ್ ಆಂಥನಿ ಜೋಶುಆ ದುಬೈನ ಮಸೀದಿಯೊಂದರಲ್ಲಿ ತಾನು ಮತ್ತು ಇಬ್ಬರು ಸ್ನೇಹಿತರು ಪ್ರಾರ್ಥಿಸುತ್ತಿದ್ದ ಚಿತ್ರವನ್ನು ಪೋಸ್ಟ್ ಮಾಡಿದ ಬಳಿಕ ಆನ್‌ಲೈನ್‌ನಲ್ಲಿ ಆಘಾತಕಾರಿ,ಮುಸ್ಲಿಮ್ ವಿರೋಧಿ ನಿಂದನೆಯ ದಾಳಿಗೆ ಗುರಿಯಾಗಿದ್ದಾರೆ. ‘ನಿರಾಶ’ ನೆಟಿಜನ್‌ಗಳು ‘‘ನಾವಿನ್ನು ಮುಂದೆ ನಿಮ್ಮನ್ನು ಬೆಂಬಲಿಸುವುದಿಲ್ಲ ’’ ಎಂದು ಆಂಥನಿಗೆ ಧಮ್ಕಿಯನ್ನೂ ಹಾಕಿದ್ದಾರೆ.

ನೈಜಿರಿಯಾ ಮೂಲದವರಾಗಿರುವ ಆಂಥನಿ ಮುಸ್ಲಿಮ್ ಧರ್ಮವನ್ನು ಪಾಲಿಸುವುದಿಲ್ಲ, ಆದರೆ ಅವರು ಮುಸ್ಲಿಮರಾಗಿರುವ ತನ್ನಿಬ್ಬರು ಸ್ನೇಹಿತರ ಜೊತೆ ಆ ಧರ್ಮದ ಸಂಸ್ಕೃತಿಯ ಅನುಭವ ಪಡೆದುಕೊಳ್ಳುತ್ತಿದ್ದರು ಎಂದು ದಿ ಮೆಟ್ರೋ ವರದಿ ಮಾಡಿದೆ.

ಜೋಶುವಾ ಇದನ್ನು ಪ್ರಾರ್ಥನೆಗಾಗಿ ಕೈಗಳನ್ನು ಜೋಡಿಸಿರುವ ಎಮೋಜಿಯೊಂದಿಗೆ ತನ್ನ ಎಂಟು ಲಕ್ಷ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ.

ಅದೃಷ್ಟ, ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಜೊತೆಗೆ ಪ್ರಾರ್ಥನೆ ಯಶಸ್ಸಿನ ದೃಢವಾದ ಬುನಾದಿಯಾಗಿದೆ. ನನ್ನ ಸೋದರ ಪ್ರಾರ್ಥನೆಗೆಂದು ಹೊರಟಿದ್ದಾಗ ಆತನೊಂದಿಗೆ ಸೇರಿಕೊಂಡಿದ್ದು ಹಿತವಾಗಿತ್ತು ಎಂದಿರುವ ಆಂಥನಿ, ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 20 ಲಕ್ಷ ಫಾಲೋವರ್‌ಗಳೊಂದಿಗೆ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.

‘ತುಂಬ ನಿರಾಶೆಯಾಗಿದೆ,ಮತ್ತೆ ನಿನ್ನ ಪಂದ್ಯವನ್ನು ನೋಡುವುದಿಲ್ಲ’ ಎಂದು ಒಬ್ಬ ಟ್ವಿಟರ್ ಕಿಡಿ ಕಾರಿದ್ದಾನೆ

‘ನಾವು ಈವರೆಗೆ ನಿನ್ನ ಅಭಿಮಾನಿಗಳಾಗಿದ್ದೆವು,ಆದರೆ ಇನ್ನು ಮಂದೆ ನಿನ್ನ ಎದುರಾಳಿಗಳಿಗಾಗಿ ಪ್ರಾರ್ಥಿಸುತ್ತೇವೆ ಎಂದು ಇತರ ಕೆಲವರು ಟ್ವೀಟಿಸಿದ್ದಾರೆ.

ಮುಂಬರಲಿರುವ ಆಂಥನಿ-ವ್ಲಾದಿಮಿರ್ ಕ್ಲಿಚ್ಕೊ ಪಂದ್ಯವನ್ನು ಪ್ರಸ್ತಾಪಿಸಿರುವ ವ್ಯಕ್ತಿಯೋರ್ವ,‘ಕ್ಲಿಚ್ಕೊ ನಿನ್ನನ್ನು ಚಚ್ಚಿಹಾಕಲಿ ’ ಎಂದು ಕುಟುಕಿದ್ದಾನೆ.

ಕೆಲವು ಟ್ವೀಟ್‌ಗಳು ಆಂಥನಿ ಸನ್‌ಗ್ಲಾಸ್ ಧರಿಸಿಕೊಂಡು ನೆಲದ ಬದಲು ಮೇಲಕ್ಕೆ ನೋಡುತ್ತಿದ್ದುದನ್ನು ಬೆಟ್ಟು ಮಾಡಿ, ನಮಾಜ್ಹ್ ವೇಳೆ ಸಾಕಷ್ಟು ಶ್ರದ್ಧೆ ಇರಲಿಲ್ಲ ಎಂದು ಟೀಕಿಸಿವೆ.

2012ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿರುವ ಆಂಥನಿ ಮೆಂಬರ್ ಆಫ್ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಮೂರು ವಾರಗಳ ಹಿಂದೆ ತನ್ನ ಕೆಲವು ಸ್ನೇಹಿತರೊಂದಿಗೆ ದುಬೈಗೆ ಭೇಟಿ ನೀಡಿದ್ದರು.

https://twitter.com/Remi354/status/821544924688617472

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News