ವಿ.ವಿಗಳಲ್ಲಿ ಭ್ರಷ್ಟಾಚಾರ ಪ್ರಕರಣ:ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆಗೆ ಸಿ.ಟಿ ರವಿ ಆಗ್ರಹ
ಮಂಗಳೂರು,ಜ.18: ಸುಮಾರು 17 ವಿಶ್ವ ವಿದ್ಯಾನಿಲಯಗಳಲ್ಲಿ ಸುಮಾರು 500 ಕೋಟಿ ರೂ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಯವರ ಹೇಳಿಕೆಯ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಾಜಿ ಸಚಿವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಈ ಸಮಿತಿಯ ತನಿಖೆಯ ವರದಿಯನ್ನು ಆರು ತಿಂಗಳ ಒಳಗೆ ಸರಕಾರ ಪಡೆಯಬೇಕು. ಹಂಸರಾಜ್ ಭಾರಧ್ವಜ್‌ರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಭೃಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಅವರು ರಾಜ್ಯಪಾಲರಾಗಿದ್ದ ಅವಧಿಯಲ್ಲಿ ವಿಶ್ವ ವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಾತಿಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಹಣ ಹಾಗೂ ಜಾತಿಯ ಆಧಾರದಲ್ಲಿ ಅರ್ಹತೆ ಇಲ್ಲದ ಕೆಲವರನ್ನು ಈ ಸ್ಥಾನಕ್ಕೆ ನೇಮಿಸಲಾಗಿತ್ತು. ಈ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರಪರಿಹಾರಕ್ಕೆ ಸರಕಾರ ಸಾಕಷ್ಟು ಸೂಕ್ತವಾದ ಕ್ರಮ ಕೈಗೊಳ್ಳದೆ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಹಿಂದಿನ ವರ್ಷಗಳಲ್ಲಿಯೂ ರಾಜ್ಯ ಸರಕಾರ ಕೇಳಿದಷ್ಟು ಪರಿಹಾರವನ್ನು ಕೇಂದ್ರ ಸರಕಾರ ನೀಡಿಲ್ಲ.ಬಿಡುಗಡೆಯಾದ ಮೊತ್ತವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ರಾಜ್ಯಸರಕಾರದ ಮಾಡುತ್ತಿರುವ ಟೀಕೆ ರಾಜ್ಯದಲ್ಲಿ ಆಡಳಿತ ಹದ ಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಹೇಳಿಕೆ ಇದ್ದಕ್ಕೆ ಸಾಕ್ಷಿಯಾಗಿದೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯೋಗೀಶ್ ಭಟ್,ಸುಲೋಚನಾ ಭಟ್,ಮೋನಪ್ಪ ಭಂಡಾರಿ,ಉಮಾನಾಥ ಕೋಟ್ಯಾನ್,ನಮಿತಾ ಶ್ಯಾಂ ಮೊದಲಾದವರು ಉಪಸ್ಥಿತರಿದ್ದರು.