ಮಾನವ ಹಕ್ಕು ಉಲ್ಲಂಘನೆಗೆ ದೂರು ನೀಡಿ: ಸಿ.ಜಿ.ಹುನಗುಂದ

Update: 2017-01-18 14:38 GMT

ಕಟಪಾಡಿ, ಜ.18: ಗೌರವಯುತ ಜೀವನ ನಡೆಸುವುದು ಪ್ರತಿಯೊಬ್ಬರ ಹಕ್ಕು. ಈ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ನೇರವಾಗಿ ತಮಗೆ ಅಥವಾ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ ಹುನಗುಂದ ತಿಳಿಸಿದ್ದಾರೆ.

 ಕಟಪಾಡಿಯ ಎಸ್.ವಿ.ಎಸ್ ಶಾಲೆಯಲ್ಲಿ ಬುಧವಾರ ನಡೆದ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. 

ಪ್ರತಿಯೊಬ್ಬ ವ್ಯಕ್ತಿಯೂ ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಬದುಕು, ಸ್ವಾತಂತ್ರ, ಸಮಾನತೆ ಮತ್ತು ಘನತೆಯ ವಿಷಯಗಳಲ್ಲಿ ಸಮಾನ ಹಕ್ಕುಗಳನ್ನು ಹೊಂದಿರುತ್ತಾನೆ. ಈ ಹಕ್ಕುಗಳಿಗೆ ಇತರರಿಂದ ಅಡಚಣೆ ಉಂಟಾದಲ್ಲಿ ಆಯೋಗಕ್ಕೆ ದೂರು ನೀಡಿ ಸೂಕ್ತ ಪರಿಹಾರ ಪಡೆಯಬಹುದು ಎಂದರು.

ಯಾವುದೇ ದೇಶದ ಅಭಿವೃದ್ಧಿ ಮತ್ತು ಸ್ಥಾನಮಾನ, ಆ ದೇಶದಲ್ಲಿ ಮಾನವ ಹಕ್ಕುಗಳಿಗೆ ನೀಡುವ ಗೌರವದಿಂದ ನಿರ್ಧಾರವಾಗಲಿದೆ. ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಂದು ಸರಕಾರದ ಜವಾಬ್ದಾರಿಯಾಗಿದೆ ಎಂದು ಹುನಗುಂದ ತಿಳಿಸಿದರು.

ಕೇಂದ್ರ ಆಡಳಿತದ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಆಡಳಿತದ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕು ಆಯೋಗ ಹಕ್ಕುಗಳ ರಕ್ಷಣೆ ಮಾಡಲಿವೆ. ಕಾನೂನು ಸುವ್ಯವಸ್ಥೆ ಉಲ್ಲಂಘನೆ ಪ್ರಕರಣಗಳು ಹಾಗೂ ಮೂಲಭೂತ ನಾಗರೀಕ ಸೌಲ್ಯ ವಂಚಿತ ಪ್ರಕರಣಗಳ ಕುರಿತು ಆಯೋಗ ತನಿಖೆ ನಡೆಸಲಿದ್ದು, ರಾಜ್ಯದಲ್ಲಿ ಆಯೋಗಕ್ಕೆ ಸಲ್ಲಿಕೆಯಾಗುವ ಪ್ರಕರಣಗಳಲ್ಲಿ ಶೇ.50ರಿಂದ 60ರಷ್ಟು ಪೊಲೀಸ್ ದೌರ್ಜನ್ಯ ಪ್ರಕರಣಗಳಾಗಿವೆ ಎಂದವರು ವಿವರಿಸಿದರು.

 ಯುವ ಜನತೆಯಿಂದ ದೇಶದ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿರುವುದರಿಂದ ಯುವ ಜನತೆ ಮಾನವ ಹಕ್ಕುಗಳು ಕುರಿತು ಹೆಚ್ಚಿನ ಅರಿವು ಹೊಂದುವುದು ಅತ್ಯಗತ್ಯ ಎಂದು ಸಿ.ಜಿ ಹುನಗುಂದ ತಿಳಿಸಿದರು.

ಎಸ್.ವಿ.ಎಸ್ ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಮಾಧವ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಾನವ ಹಕ್ಕು ಫೆಡರೇಷನ್‌ನ ಉಡುಪಿ ಘಟಕದ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಕೇಂದ್ರೀಯ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ರೈ, ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ, ಜಯಲಕ್ಷ್ಮೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News