ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘದ ವಾರ್ಷಿಕೋತ್ಸವ
ಮಂಗಳೂರು, ಜ. 18: ಕಾರ್ಪೊರೇಶನ್ ಬ್ಯಾಂಕ್ ನೌಕರರ ಕ್ರೀಡಾ ಹಾಗೂ ಮನೋರಂಜನಾ ಸಂಘದ ವಾರ್ಷಿಕೋತ್ಸವವು ಇತ್ತೀಚೆಗೆ ಪಾಂಡೇಶ್ವರದಲ್ಲಿನ ಕಾರ್ಪೊರೇಶನ್ ಬ್ಯಾಂಕಿನ ಪ್ರಧಾನ ಕಚೇರಿಯ ಕಟ್ಟಡದ ಸಭಾಂಗಣದಲ್ಲಿ ಜರಗಿತು.
ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಯ್ ಕುಮಾರ್ ಗರ್ಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಮೆಹ್ತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಕುಮಾರ್ ಗರ್ಗ್, ಸಾಮಾಜಿಕ ಕಳಕಳಿಯನ್ನು ಹೊಂದಿದಂತಹ ಇಂತಹ ಸಂಘವು ಕ್ರೀಡೆ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಸಿಬ್ಬಂದಿಗಳ ಮನಸ್ಸಿಗೆ ಸ್ಪೂರ್ತಿಯನ್ನು ನೀಡುತ್ತದೆ ಎಂದರು.
ಕಾರ್ಪೊರೇಶನ್ ಬ್ಯಾಂಕಿನ ಸಿಬ್ಬಂದಿಗಳಾಗಿದ್ದು, ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಯನ್ನು ತೋರಿದ ಕ್ರೀಡಾಪಟುಗಳಾದ ಕ್ಲಿಫರ್ಡ್ ಜೋಶುವಾ, ಅಶೋಕ, ಪುರಂದರ, ತಾರಾನಾಥ ಶೆಟ್ಟಿ, ರೇಮಂಡ್ ಡಿಸೋಜಾ ಹಾಗೂ ರೀಟಾ ಡಿಸೋಜಾ ಅವರನ್ನು ಗೌರವಿಸಲಾಯಿತು.
ವರ್ಷವಿಡೀ ನಡೆದ ಹಲವಾರು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಭೆಯ ಆರಂಭದಲ್ಲಿ ಪಲ್ಲವಿ ಗುಲ್ವಾಡಿ ಪ್ರಾರ್ಥಿಸಿದರು.
ಸಂಘದ ಅಧ್ಯಕ್ಷ ಲಕ್ಷ್ಮೀನಾಥ ರೆಡ್ಡಿ ಸ್ವಾಗತಿಸಿದರು.
ಸಂಘದ ಕಾರ್ಯದರ್ಶಿ ಶ್ರೀಪತಿ ಅಲಂಗಾರು ವಂದಿಸಿದರು.
ಚೇತನ್ ಹಾಗೂ ದಿವ್ಯಾ ಕೆ. ಕಾರ್ಯಕ್ರಮ ನಿರೂಪಿಸಿದರು.
ಸಿಬ್ಬಂದಿಗಳು ಹಾಗೂ ಸಿಬ್ಬಂದಿಗಳ ಮಕ್ಕಳಿಂದ ಪ್ರಹಸನ, ನೃತ್ಯ, ಹಾಡುಗಳಿಂದ ಕೂಡಿದ ಮನೋರಂಜನಾ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಿತು.