×
Ad

ಖಾಸಗಿಯವರಿಗೆ ಮಣಿಯದೆ ಸರಕಾರದ ಪರ ಕೆಲಸ ಮಾಡಿ : ಕೆಎಸ್‌ಆರ್‌ಟಿಸಿ, ಆರ್‌ಟಿಓಗಳಿಗೆ ಸಚಿವ ಪ್ರಮೋದ್ ಸೂಚನೆ

Update: 2017-01-18 20:47 IST

ಉಡುಪಿ, ಜ.18: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅಧಿಕಾರಿಗಳು ಖಾಸಗಿ ಬಸ್ ಮಾಲಕರ ಲಾಬಿಗೆ ಮಣಿಯದೆ ಕೆಎಸ್‌ಆರ್‌ಟಿಸಿ ಪರವಾಗಿ ಕೆಲಸ ಮಾಡಬೇಕು. ಖಾಸಗಿ ಪರ ವಹಿಸುವ ಅಧಿಕಾರಿಗಳನ್ನು ನಾವು ಸಹಿಸುವುದಿಲ್ಲ ಎಂದು ರಾಜ್ಯ ಮೀನುಗಾರಿಕೆ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವತಿಯಿಂದ ನಡೆದ ಸಾರಿಗೆ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕೆಎಸ್‌ಆರ್‌ಟಿಸಿ ಲಾಭಕ್ಕಾಗಿ ಇರುವ ಸಂಸ್ಥೆ ಅಲ್ಲ. ಜಿಲ್ಲೆಯಲ್ಲಿ 30 ಬಸ್ ಗಳಿಗೆ ಪರವಾನಿಗೆ ದೊರೆತರೂ ಆರ್‌ಟಿಓ ವೇಳಾಪಟ್ಟಿ ನೀಡುತ್ತಿಲ್ಲ. ಆರ್‌ಟಿಓ ಕೇವಲ ಖಾಸಗಿಯವರಿಗೆ ಮಾತ್ರ ಲಾಭ ಮಾಡಿಕೊಡದೆ ಕೆಎಸ್ ಆರ್‌ಟಿಸಿ ಬಸ್‌ಗಳನ್ನು ಲಾಭ ಇರುವ ಮಾರ್ಗಗಳಲ್ಲಿ ಓಡಿಸಲು ಪರವಾನಿಗೆ ನೀಡಬೇಕು. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಜೊತೆಯಾಗಿ ಜನರಿಗೆ ಸೇವೆ ನೀಡಬೇಕು. ವಿದ್ಯಾರ್ಥಿಗಳಿಗೆ ಪಾಸ್ ಕೊಡುವ ವ್ಯವಸ್ಥೆ ಮಾಡಬೇಕೆಂದರು.

ಉಡುಪಿ-ಆಗುಂಬೆಗೆ ಬಸ್:

ಉಡುಪಿ-ಹೆಬ್ರಿ ಮಾರ್ಗದಲ್ಲಿ ಒಂದೇ ಒಂದು ಸರಕಾರಿ ಬಸ್ ಇಲ್ಲ ಎಂಬ ಸದಾಶಿವ ಪ್ರಭು ಅವರ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಮಾರ್ಗದಲ್ಲಿ ಆದ್ಯತೆ ಮೇರೆ ಬಸ್‌ನ್ನು ಓಡಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಗುಂಬೆ ಮಾರ್ಗದಲ್ಲಿ ಮಿನಿ ಬಸ್ ಓಡಿಸಬೇಕೆಂಬ ಬೇಡಿಕೆಗೆ ಉತ್ತರಿಸಿದ ಅಧಿಕಾರಿ ಗಳು, 15 ದಿನಗಳ ಹಿಂದೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಸದ್ಯ ದಲ್ಲೇ ಈ ಮಾರ್ಗದಲ್ಲಿ ಬಸ್ ಓಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮಣಿಪಾಲ ಪ್ರಗತಿನಗರದಲ್ಲಿರುವ ಐಟಿಐಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹೋಗುತ್ತಿದ್ದು, ಈ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಬಸ್ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳು ಸಭೆಯಲ್ಲಿ ಮನವಿ ಮಾಡಿದರು. ನರ್ಮ್ ಬಸ್‌ಗೆ ಮಲ್ಪೆ ಬೀಚ್‌ವರೆಗೆ ಬರಲು ಅವಕಾಶ ಇದ್ದರೂ ಖಾಸಗಿಯವರು ಬರಲು ಬಿಡುತ್ತಿಲ್ಲ ಎಂದು ರಮೇಶ್ ಕಾಂಚನ್ ಆರೋಪಿಸಿದರು.

ಇತ್ತೀಚೆಗೆ ನಗರದಲ್ಲಿ ನರ್ಮ್ ಬಸ್‌ಗಳ ನಿವಾರ್ಹಕರು ಹಾಗೂ ಚಾಲಕ ರಿಗೆ ಖಾಸಗಿಯವರು ಹಲ್ಲೆ ನಡೆಸಿರುವುದನ್ನು ಖಂಡಿಸಿದ ರಮೇಶ್ ಕಾಂಚನ್ ಈ ಬಗ್ಗೆ ಖಾಸಗಿಯವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಸ್ಥಳೀಯರನ್ನೇ ನೇಮಕ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಶಿವಪುರದ ಸುರೇಶ್ ಶೆಟ್ಟಿ, ಉದ್ಯಾವರ ಗ್ರಾಪಂ ಸದಸ್ಯ ಕಿರಣ್ ಕುಮಾರ್, ನಗರಸಭಾ ಸದಸ್ಯ ಯುವ ರಾಜ್, ಕುಂದಾಪುರದ ದಿವಾಕರ್, ಶಿರೂರಿನ ಸುರೇಂದ್ರ ಖಾರ್ವಿ ಸೇರಿ ದಂತೆ 47 ಮಂದಿಯ ಅಹವಾಲುಗಳನ್ನು ಸಭೆಯಲ್ಲಿ ಆಲಿಸಲಾಯಿತು.

ಜಿಲ್ಲೆಗೆ 30 ಹೊಸ ಬಸ್: 

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ ಮಾತನಾಡಿ, ರಸ್ತೆ ಸಾರಿಗೆ ರಾಷ್ಟ್ರೀಕರಣ ಆಗದ ಉಡುಪಿ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಓಡಿಸ ಬೇಕಾದರೆ ಆ ಪ್ರದೇಶದ ಸಾರ್ವಜನಿಕರಿಂದ ಬಂದ ಅರ್ಜಿಯನ್ನು ಪರಿ ಶೀಲಿಸಿ ಸಮೀಕ್ಷೆ ನಡೆಸಿ ಪ್ರಸ್ತಾವನೆಯನ್ನು ಆರ್‌ಟಿಎಗೆ ಸಲ್ಲಿಸಲಾಗುವುದು. ಆರ್‌ಟಿಎ ಒಪ್ಪಿಗೆ ನೀಡಿದರೆ ಆರ್‌ಟಿಓ ವೇಳಾಪಟ್ಟಿಯನ್ನು ತಯಾರಿಸುತ್ತಾರೆ. ಮುಂದೆ ನಿಗಮದ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಕ್ರಮ ತೆಗೆದುಕೊಳ್ಳ ಲಾಗುತ್ತದೆ ಎಂದರು. ಉಡುಪಿ ನಗರದಲ್ಲಿ 12ನರ್ಮ್ ಬಸ್‌ಗಳ ಸಂಚಾರವನ್ನು ಆರಂಭಿಸ ಲಾಗಿದ್ದು, ಮುಂದೆ ಇನ್ನಷ್ಟು ಬಸ್ ಓಡಿಸಲು ನಾವು ಬದ್ಧರಾಗಿದ್ದೇವೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಆಯ್ಯುಷ 7ಲಕ್ಷ ಕಿಮೀ. ಕುಂದಾಪುರ ಡಿಪ್ಪೋಗೆ ಈಗ ಮೂರು ಹೊಸ ಬಸ್‌ಗಳು ಬಂದಿದ್ದು, ಎರಡು ಮೂರು ತಿಂಗಳಲ್ಲಿ 30 ಹೊಸ ಬಸ್‌ಗಳು ಬರಲಿವೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ಸಂಚಲನಾಧಿಕಾರಿ ಎಂ.ಬಿ. ಜೈಶಾಂತ ಕುಮಾರ್, ಯಾಂತ್ರಿಕ ಅಭಿಯಂತರ ಶರಣು ಬಸವರಾಜು, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News