ಪಾತಾಳಕ್ಕೆ ಕುಸಿದ ಟ್ರಂಪ್ ಜನಪ್ರಿಯತೆ

Update: 2017-01-18 16:09 GMT

ವಾಶಿಂಗ್ಟನ್, ಜ.17: ಶುಕ್ರವಾರ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್‌ಗೆ ಸಿಎನ್‌ಎನ್/ ಓಆರ್‌ಸಿ ಸಮೀಕ್ಷೆಯಲ್ಲಿ ಕೇವಲ ಶೇ.40ರಷ್ಟು ಮಂದಿಯ ಅನುಮೋದನೆ ವ್ಯಕ್ತವಾಗಿದೆ. ಇತೀಚಿನ ದಶಕಗಳಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ಅಧಿಕಾರಕ್ಕೇರುವ ಸಂದರ್ಭದಲ್ಲಿ ಸಮೀಕ್ಷೆಯಲ್ಲಿ ಪಡೆ ಅತ್ಯಂತ ಕಡಿಮೆ ಪ್ರಮಾಣದ ಜನಬೆಂಬಲ ಇದಾಗಿದೆ.ಈ ಮೊದಲಿನ ಮೂವರು ಅಧ್ಯಕ್ಷರುಗಳಿಗಿಂತ ಟ್ರಂಪ್‌ಗೆ 20 ಅಂಕಗಳಷ್ಟು ಕಡಿಮೆ ಅನುಮೋದನೆ ದೊರೆತಿದೆ.

ಒಬಾಮಾ 2009ರಲ್ಲಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಅವರಿಗೆ ಶೇ.84ರಷ್ಟು ಅನುಮೋದನೆ ವ್ಯಕ್ತವಾಗಿತ್ತು. 1992ರ ಡಿಸೆಂಬರ್‌ನಲ್ಲಿ ಬಿಲ್‌ಕ್ಲಿಂಟನ್ ಅಧಿಕಾರ ವಹಿಸಿದಾಗ ಅವರಿಗೆ ಶೇ. 67 ಹಾಗೂ 2001ರ ಜನವರಿಯಲ್ಲಿ ಜಾರ್ಜ್‌ಬುಶ್‌ಗೆ ಶೇ. 61 ಜನಬೆಂಬಲ ವ್ಯಕ್ತವಾಗಿತ್ತು.

ಚುನಾವಣೆಯ ದಿನದಿಂದೀಚೆಗೆ ತಮಗೆ ಅಮೆರಿಕದ ಅಧ್ಯಕ್ಷೀಯ ಹುದ್ದೆಯನ್ನು ನಿಭಾಯಿಸಲು ಟ್ರಂಪ್‌ಗೆ ಇರುವ ಸಾಮರ್ಥ್ಯದ ಬಗ್ಗೆ ತಮಗೆ ಭರವಸೆ ಕಡಿಮೆಯಾಗಿದೆಯೆಂದು ಶೇ. 53 ಮಂದಿ ಹೇಳಿದ್ದಾರೆ.

ಆದಾಗ್ಯೂ ಮೆಕ್ಸಿಕೊದಲ್ಲಿ ಸಾಮಾಗ್ರಿಗಳನ್ನು ಉತ್ಪಾದಿಸುವ ಕಂಪೆನಿಗಳಿಗೆ ತೆರಿಗೆ ಹೇರಿಕೆ, ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಉತ್ತಮ ವೇತನದ ಉದ್ಯೋಗಗಳ ಸೃಷ್ಟಿ ಸಹಿತ ಚುನಾವಣಾ ಪ್ರಚಾರದ ವೇಳೆ ತಾನು ನೀಡಿದ್ದ ಕೆಲವು ಭರವಸೆಗಳನ್ನು ಟ್ರಂಪ್ ಈಡೇರಿಸುವರೆಂಬ ವಿಶ್ವಾಸವನ್ನು ಹಲವಾರು ಅಮೆರಿಕನ್ನರು ಹೊಂದಿದ್ದಾರೆಂದು ಸಿಎನ್‌ಎನ್/ ಓಆರ್‌ಸಿ ಸಮೀಕ್ಷೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News