ಪುತ್ತೂರು ರೈಲ್ವೇ ಸ್ಟೇಶನ್ ಬಳಿ ಹುಲ್ಲಿಗೆ ಬೆಂಕಿ
ಪುತ್ತೂರು , ಜ.18 : ಪುತ್ತೂರು ನಗರದ ಹೊರವಲಯದಲ್ಲಿನ ರೈಲ್ವೇ ಸ್ಟೇಶನ್ ಬಳಿಯ ಒಣ ಹುಲ್ಲು ಆವರಿಸಿದ್ದ ಪ್ರದೇಶಕ್ಕೆ ಬುಧವಾರ ಸಂಜೆ ವೇಳೆ ಬೆಂಕಿ ತಗಲಿದ್ದು, ಇಡೀ ವ್ಯಾಪ್ತಿಯ ಪ್ರದೇಶ ಸಟ್ಟು ಹೋಗಿದೆ. ಆದರೆ ಯಾವುದೇ ಜೀವ ಹಾನಿ, ಆಸ್ತಿ ಹಾನಿ ಸಂಭವಿಸಿಲ್ಲ.
ಬೆಂಕಿ ತಗುಲಿದ್ದ ಪ್ರದೇಶದಲ್ಲಿ ತ್ಯಾಜ್ಯಗಳ ರಾಶಿಯಿತ್ತು. ಅಲ್ಲದೆ ಒಣ ಹುಲ್ಲು ಹೆಚ್ಚಾಗಿರುವುದರಿಂದ ಆ ವ್ಯಾಪ್ತಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಗಾಳಿಯ ಪರಿಣಾಮ ಇಡೀ ಪ್ರದೇಶಕ್ಕೆ ಬೆಂಕಿಯು ವಿಸ್ತರಣೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ತಕ್ಷಣ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿರುವ ಪುತ್ತೂರಿನ ಅಗ್ನಿಶಾಮಕದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಪ್ರಮಾದ ತಪ್ಪಿದೆ.
ಈ ಪ್ರದೇಶದಲ್ಲಿ ಕಳೆದ 5 ವರ್ಷಗಳಿಂದ ಭಿಕ್ಷುಕನೊಬ್ಬ ಮಲಗುತ್ತಿದ್ದು ನಗರದಲ್ಲಿನ ತ್ಯಾಜ್ಯ ಪೆಟ್ಟಿಗೆಗಳನ್ನು ತಂದು ಅಲ್ಲಿ ರಾಶಿ ಹಾಕುತ್ತಿದ್ದ, ಇದರಿಂದಾಗಿ ಅಲ್ಲಿ ಕಸದ ರಾಶಿ ತುಂಬಿತ್ತು. ಆತನೇ ತ್ಯಾಜ್ಯ ರಾಶಿಗೆ ಬೆಂಕಿ ಇಟ್ಟ ಪರಿಣಾಮವಾಗಿ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ. ಆದರೆ ಈ ಬೆಂಕಿ ಅವಘಡಕ್ಕೆ ಕಾರಣ ತಿಳಿದಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ರಾಮಚಂದ್ರ ನಾಯ್ಕ ತಿಳಿಸಿದ್ದಾರೆ.