×
Ad

ಹೈದರಾಬಾದ್ ವಿವಿ ಪ್ರವೇಶಿಸಿದ್ದ ಪತ್ರಕರ್ತನ ವಿರುದ್ಧ ಪ್ರಕರಣ

Update: 2017-01-18 23:56 IST

ಹೈದರಾಬಾದ್,ಜ.18: ಅನುಮತಿಯಿಲ್ಲದೆ ಹೈದರಾಬಾದ್ ವಿವಿ ಕ್ಯಾಂಪಸ್‌ನ್ನು ಪ್ರವೇಶಿಸಿದ್ದಕ್ಕಾಗಿ ಆಂಗ್ಲ ನಿಯತಕಾಲಿಕ ವೊಂದರ ಪತ್ರಕರ್ತನ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವಿವಿ ಭದ್ರತಾ ಅಧಿಕಾರಿಗಳ ದೂರಿನ ಮೇರೆಗೆ ಪತ್ರಕರ್ತ ಕುನಾಲ್ ಎಸ್. ವಿರುದ್ಧ ಐಪಿಸಿಯಡಿ ಅತಿಕ್ರಮ ಪ್ರವೇಶ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ(ಮಧಾಪುರ ವಲಯ) ಪಿ.ವಿಶ್ವಪ್ರಸಾದ್ ತಿಳಿಸಿದರು. ಕುನಾಲ್ ಯಾರಿಗೂ ತಿಳಿಯದಂತೆ ವಿವಿ ಕ್ಯಾಂಪಸ್‌ನೊಳಗೆ ನುಸುಳಿದ್ದರು ಮತ್ತು ರೋಹಿತ್ ವೇಮುಲಾ ಮೊದಲ ಪುಣ್ಯತಿಥಿಯ ಅಂಗವಾಗಿ ವಿದ್ಯಾರ್ಥಿಗಳ ಗುಂಪೊಂದು ನಡೆಸುತ್ತಿದ್ದ ಪ್ರತಿಭಟನೆಯ ವರದಿ ಮಾಡುತ್ತಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ವೇಮುಲಾ ಕಳೆದ ವರ್ಷದ ಜ.17ರಂದು ತನ್ನ ಹಾಸ್ಟೆಲ್ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿವಿಯ ಪ್ರಾಧ್ಯಾಪಕರೋರ್ವರ ಆಹ್ವಾನದ ಮೇರೆಗೆ ಪ್ರತಿಭಟನೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಲು ಅಧಿಕೃತ ಕರ್ತವ್ಯದ ಮೇಲೆ ವಿವಿಯೊಳಗೆ ಪ್ರವೇಶಿಸಿದ್ದೆ. ಹಾಗೆ ಮಾಡುವಾಗ ತನ್ನ ಗುರುತು ಪತ್ರವನ್ನು ತೋರಿಸಿದ್ದೆ. ಆದರೆ ತನ್ನ ಬಳಿ ವಿಸಿಟರ್ಸ್ ಪಾಸ್ ಇರಲಿಲ್ಲ ಎಂದು ವಿವಿ ಈಗ ಹೇಳುತ್ತಿದೆ ಎಂದು ಕುನಾಲ್ ತಿಳಿಸಿದರು.
ಪೊಲೀಸರು ತನನ್ನ್ನು ಕಮಿಷನರ್ ಕಚೇರಿಗೆ ಕರೆದೊಯ್ದಿದ್ದರು. ಅಲ್ಲಿ ಎಸಿಪಿ ದರ್ಜೆಯ ಅಧಿಕಾರಿ ಗಂಟೆಗಳ ಕಾಲ ಪ್ರಶ್ನಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನ್ನನ್ನು ಬಿಟ್ಟಿದ್ದಾರೆ ಎಂದು ಕುನಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News