ಜ.24: ಮೂಡುಬಿದಿರೆಯಲ್ಲಿ ದ.ಕ. ಜಿಲ್ಲಾ ಶೈಕ್ಷಣಿಕ ಮಹಾಸಮ್ಮೇಳನ

Update: 2017-01-18 18:44 GMT

ಮೂಡುಬಿದಿರೆ, ಜ.18: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ.)ಬೆಂಗಳೂರು ವತಿಯಿಂದ ದ.ಕ. ಜಿಲ್ಲಾ ಸಮಿತಿ ಮಂಗಳೂರು ಹಾಗೂ ಮೂಡುಬಿದಿರೆ ವಲಯದ ಸಹಯೋಗದೊಂದಿಗೆ ನಡೆಯಲಿರುವ ‘ಶೋಧ-2017’ ದ.ಕ ಜಿಲ್ಲಾ ಶೈಕ್ಷಣಿಕ ಮಹಾಸಮ್ಮೇಳನವು ಜ.24ರಂದು ಮೂಡುಬಿದಿರೆ ಪದ್ಮಾವತಿ ಕಲಾಮಂದಿರ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಶಿವಶಂಕರ್ ಭಟ್ ಕೆ. ಹೇಳಿದರು.

ಅವರು ಬುಧವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘವು ಸದಾ ಕ್ರಿಯಾಶೀಲವಾಗಿರಬೇಕಾದರೆ ಒಂದಿಲ್ಲೊಂದು ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಸಂಘವು ಕೇವಲ ಶಿಕ್ಷಕರ ಬೇಡಿಕೆಗಳ ಬಗೆಗೆ ಹೋರಾಟ ಮಾಡುವುದಲ್ಲದೆ, ಸರಕಾರದ ವಿವಿಧ ಯೋಜನೆಗಳಾದ ವಿದ್ಯಾವಿಕಾಸ, ಅಕ್ಷರದಾಸೋಹ, ಸರ್ವಶಿಕ್ಷಣ ಅಭಿಯಾನ, ಚಿಣ್ಣರ ಅಂಗಳ, ಬಾ ಬಾಲೆ ಶಾಲೆಗೆ, ಶಾಲಾ ಗುಣಮಟ್ಟ, ವೌಲ್ಯಾಂಕನ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಂತಹ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಲ್ಲಿ ಸ್ಪಂದಿಸುತ್ತಿದೆ ಎಂದು ಹೇಳಿದರು.

ದ.ಕ. ಜಿಲ್ಲೆಯ ಸುಮಾರು 1,000ದಷ್ಟು ಶಿಕ್ಷಕ ಶಿಕ್ಷಕಿಯರು ಭಾಗವಹಿಸಲಿರುವ ಈ ಸಮಾವೇಶವನ್ನು ಅರಣ್ಯ ಸಚಿವ ಬಿ ರಮಾನಾಥರೈ ಉದ್ಘಾಟಿಸಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಕೇರಳ ರಾಜ್ಯ ಶೈಕ್ಷಣಿಕ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಲಿದ್ದಾರೆ.

ಪೂರ್ವಾಹ್ನ ಶಾಸಕ ಕೆ.ಅಭಯಚಂದ್ರ ಜೈನ್ ಶೈಕ್ಷಣಿಕ ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದು, ಜಿಲ್ಲಾ ಶಿಕ್ಷಕ ಸಂಘದ ನಿಕಟಪೂರ್ವಾಧ್ಯಕ್ಷ ಶ್ರೀಧರ್ ಉಳ್ಳಾಲ್ ಅಧ್ಯಕ್ಷತೆ ವಹಿಸುವರು. ಸವಣೂರು ವಿದ್ಯಾರಶ್ಮಿ ಮಹಾವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ‘ಪ್ರಾಥಮಿಕ ಶಿಕ್ಷಣದ ಸವಾಲುಗಳು’ ವಿಷಯದ ಕುರಿತು ವಿಚಾರಗೋಷ್ಠಿ ನಡೆಸಲಿದ್ದಾರೆ. ಅಪರಾಹ್ನ 2 ರಿಂದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಮತ್ತು ರಾಜ್ಯಪ್ರಧಾನ ಕಾರ್ಯದರ್ಶಿ ವಿ.ಎಂ. ನಾರಾಯಣ ಸ್ವಾಮಿಯವರೊಂದಿಗೆ ನೇರಸಂವಾದ ಕಾರ್ಯಕ್ರಮ ನಡೆ ಯಲಿದೆ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಈ ಸಂದರ್ಭ ಸನ್ಮಾನಿ ಸಲಾಗುವುದು ಎಂದುತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಮೂಡುಬಿದಿರೆ ವಲಯ ಅಧ್ಯಕ್ಷ ನಾಗೇಶ್, ರಮೇಶ್ ನಾಯಕ್ ಹಾಗೂ ಜಿಲ್ಲಾ ಖಜಾಂಚಿ ನವೀನ್ ಪಿ.ಎಸ್.ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News