ಮಂಗಳೂರು ವಿಶ್ವವಿದ್ಯಾನಿಲಯ ನಾರಾಯಣಗುರು ಅಧ್ಯಯನ ಪೀಠ ಇಂದು ಉದ್ಘಾಟನೆ

Update: 2017-01-18 18:55 GMT

ಕೊಣಾಜೆ, ಜ.18: ದಕ್ಷಿಣ ಭಾರತದಲ್ಲೇ ಪ್ರಭಾವಶಾಲಿ ಸಮಾಜ ಸುಧಾರಕರಾಗಿ ಖ್ಯಾತರಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಹೆಸರಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಲಾಗುವ ಅಧ್ಯಯನ ಪೀಠ ಜ.19ರಂದು ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 1:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನೂತನ ಅಧ್ಯಯನ ಪೀಠ ಹಾಗೂ ಅನ್ವಯಿಕ ಸಸ್ಯಶಾಸ ವಿಭಾಗದ ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಮಾಡ್ಯುಲರ್ ಪ್ರಯೋಗಾಲಯಗಳನ್ನು ಉದ್ಘಾಟಿಸುವರು.

ಅರಣ್ಯ ಸಚಿವ ಬಿ.ರಮಾನಾಥ ರೈ 2016-17ನೆ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸಿರುವ ಮಂಗಳೂರು ವಿಶ್ವವಿದ್ಯಾ ನಿಲಯದ ಕ್ರೀಡಾಪಟುಗಳನ್ನು ಸನ್ಮಾನಿಸುವರು. ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಶಿಷ್ಯವೇತನ ರಹಿತ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ಶಿಷ್ಯವೇತನ ನೀಡಿಕೆ ಯೋಜನೆ ಉದ್ಘಾಟಿಸಲಿದ್ದಾರೆ. ಶಾಸಕ ವಿನಯಕುಮಾರ್ ಸೊರಕೆ ಅಧ್ಯಯನ ಪೀಠದ ಬ್ರಹ್ಮಶ್ರೀ ನಾರಾಯಣಗುರು ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ವಿಶ್ವವಿದ್ಯಾನಿಲಯದ ಪ್ರಸಾರಾಂಗದ ರಜತ ಮಹೋತ್ಸವದ ಅಂಗವಾಗಿ ಪ್ರಸಾರಾಂಗದ 19 ವಿಭಿನ್ನ ಪುಸ್ತಕಗಳ ಬಿಡುಗಡೆಯನ್ನು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ನೆರವೇರಿಸಲಿದ್ದಾರೆ. ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News