''ನೋಟು ರದ್ದತಿ ಅಣುಬಾಂಬ್‌ನಿಂದ ಆರ್ಥಿಕತೆ ಹಿರೋಶಿಮಾ- ನಾಗಸಾಕಿ ಆಗಿದೆ''

Update: 2017-01-19 03:56 GMT

ಮುಂಬೈ, ಜ..19: ಪ್ರಧಾನಿ ನರೇಂದ್ರ ಮೋದಿ ನೋಟು ರದ್ದತಿ ಎಂಬ ಅಣುಬಾಂಬ್ ದಾಳಿ ಮಾಡಿದ್ದು, ಇದರಿಂದ ಭಾರತದ ಆರ್ಥಿಕತೆ ಸ್ಥಿತಿಗತಿ ಹಿರೋಶಿಮಾ- ನಾಗಸಾಕಿಯಂತಾಗಿದೆ ಎಂದು ಶಿವಸೇನೆ ವಾಗ್ದಾಳಿ ಮಾಡಿದೆ.

ಅಮೆರಿಕ ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ನ ಎರಡು ನಗರಗಳ ಮೇಲೆ ಅಣುಬಾಂಬ್ ದಾಳಿ ಮಾಡಿದಂತೆ, ಮೋದಿ ಕೂಡಾ ಭಾರತದ ಆರ್ಥಿಕತೆ ಮೇಲೆ ದಾಳಿ ಮಾಡಿದ್ದಾರೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಟೀಕಿಸಿದೆ.

"ಬಹುಶಃ ಮೋದಿ ಇಂದು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಕಿವುಡು ಹಾಗೂ ಮೂಗ ಗಿಣಿಗಳನ್ನು ಸಂಪುಟದಲ್ಲಿ ಸೇರಿಸಿಕೊಂಡಿರುವ ಅವರು, ಅಂಥ ಆರ್‌ಬಿಐ ಗವರ್ನರ್ ಅವರನ್ನೇ ನೇಮಕ ಮಾಡಿಕೊಂಡಿದ್ದಾರೆ. ಈ ಮೂಲಕ ದೇಶದ ಆರ್ಥಿಕತೆ ಬುಡವೇ ಅಲ್ಲಾಡುತ್ತಿದೆ" ಎಂದು ಟೀಕಿಸಿದೆ.

"ನೋಟು ರದ್ದತಿ ಬಳಿಕ ದೇಶದಲ್ಲಿ ಸುಮಾರು 40 ಲಕ್ಷ ಮಂದಿಗೆ ಉದ್ಯೋಗ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಲಿದೆ ಎಂದು ಅಸೋಚಾಮ್ ಕೂಡಾ ಅಭಿಪ್ರಾಯಪಟ್ಟಿದೆ. ಭಾರತದ ಭವಿಷ್ಯದ ಬಗೆ ನಮಗೆ ಆತಂಕ ಶುರುವಾಗಿದೆ" ಎಂದು ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಶಿವಸೇನೆ ಮೋದಿಗೆ ತಿರುಗೇಟು ನೀಡಿದೆ.

ಮಹಾರಾಷ್ಟ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ ವೇಳೆ, ತಾವು ಶರದ್ ಪವಾರ್ ಅವರ ಸಲಹೆ ಪಡೆಯುತ್ತಿದ್ದೇನೆ ಎಂದು ಮೋದಿ ಹೇಳಿದ್ದನ್ನು ಉಲ್ಲೇಖಿಸಲಾಗಿದ್ದು, "ಬಹುಶಃ ನೋಟು ರದ್ದತಿ ವಿಚಾರದಲ್ಲಿ ಎನ್‌ಸಿಪಿ ಸಲಹೆಯನ್ನು ಪಡೆದಿದ್ದರೆ, ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಆಗಿರುವ ಸಹಕಾರ ಚಳವಳಿಗೆ ಅಪಮಾನ ಮಾಡಬೇಡಿ ಎಂದು ಸಲಹೆ ನೀಡುತ್ತಿದ್ದರು" ಎಂದು ಟಾಂಗ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News