​ವಲಸಿಗರಿಗೆ ಟಿಕೆಟ್: ಬಿಜೆಪಿ ಕಚೇರಿ ತಲುಪಿದ "ಅಮಿತ್ ಶಾ ಮುರ್ದಾಬಾದ್" ಘೋಷಣೆ

Update: 2017-01-19 04:11 GMT

ಹೊಸದಿಲ್ಲಿ, ಜ.19: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ವಲಸಿಗರಿಗೆ ಟಿಕೆಟ್ ನೀಡಿರುವ ತಂತ್ರ ಇದೀಗ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. 149 ಮಂದಿಯ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡುತ್ತಿದ್ದಂತೇ ಟಿಕೆಟ್ ಆಕಾಂಕ್ಷಿಗಳ ಆಕ್ರೋಶ ಮುಗಿಲು ಮುಟ್ಟಿದೆ.

ಅಶೋಕ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿ ಮುಂದೆ ಪ್ರತಿಭಟನಾಕಾರರು ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. 'ಅಮಿತ್ ಶಾ ಮುರ್ದಾಬಾದ್' ಎಂಬ ಘೋಷಣೆ ಪಕ್ಷದ ಕಚೇರಿ ಮುಂದೆಯೇ ಮೊಳಗುತ್ತಿದೆ.

ಪಕ್ಷದ ಕಚೇರಿಯೊಳಗೆ ಕೂಡಾ ಹಲವಾರು ಮಂದಿ ಕಾರ್ಯಕರ್ತರು ಪಕ್ಷದ ನಾಯಕತ್ವ ವಿರುದ್ಧ ಘೋಷಣೆ ಕೂಗಿದರು. ದೊಡ್ಡ ಸಂಖ್ಯೆಯ ಮಂದಿ ಪಕ್ಷದ ಹೊರಗಡೆ ಬಹಿರಂಗ ಪ್ರತಿಭಟನೆ ನಡೆಸಿದರು. ಗೌತಮ ಬುದ್ಧ ನಗರ ಜಿಲ್ಲೆಯಿಂದ ಆಗಮಿಸಿದ್ದ ಕಾರ್ಯಕರ್ತರಂತೂ, ಅಮಿತ್ ಷಾ ಮುರ್ದಾಬಾದ್ ಘೋಷಣೆ ಕೂಗಿದರು.

ವಲಸಿಗರಿಗೆ ಟಿಕೆಟ್ ನೀಡುವುದು ನಿಲ್ಲಿಸಿ, ನಿಷ್ಠಾವಂತರನ್ನು ಗುರುತಿಸಿ ಎಂಬ ಆಗ್ರಹ ಮಂಡಿಸಿದರು. ಸಮೀಕ್ಷೆ ಹೆಸರಿನಲ್ಲಿ ಸುಳ್ಳು ಹೇಳುವುದು ನಿಲ್ಲಿಸಿ. ಹೊರಗಿನವರನ್ನು ಗೌರವಿಸುವ ಭರದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಅವಮಾನಿಸುವುದು ನಿಲ್ಲಿಸಿ ಎಂದು ಒತ್ತಾಯಿಸಿದರು.

ನೋಯ್ಡ ಸಂಸದ ಹಾಗೂ ಕೇಂದ್ರ ಸಚಿವ ಮಹೇಶ್ ಶರ್ಮಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಹೊಣೆ ಹೊತ್ತಿರುವ ಓಂ ಮಾಥುರ್ ವಿರುದ್ಧವೂ ಘೋಷಣೆಗಳು ಕೇಳಿಬಂದವು. ರ್ಯಾಲಿಗೆ ಜನ ಸಂಘಟಿಸಲು ನಾವು ಬೇಕು; ಅಭ್ಯರ್ಥಿಗಳ ಆಯ್ಕೆ ಸಂದರ್ಭ ಏಕೆ ಮರೆಯುತ್ತೀರಿ ಎಂದು ಪ್ರಶ್ನಿಸುತ್ತಿರುವುದು ಕೇಳಿಬಂತು.

ಉತ್ತರ ಪ್ರದೇಶದ ವಿವಿಧೆಡೆ ಕೂಡಾ ಪಕ್ಷದ ನಾಯಕತ್ವ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಪಕ್ಷದ ಧ್ವಜವನ್ನು ಸುಟ್ಟು, ಮುಖಂಡರ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News