ಕೊನೆಯ ಸುದ್ದಿ ಗೋಷ್ಠಿಯಲ್ಲಿ ಒಬಾಮ ಹೇಳಿದ್ದೇನು ?

Update: 2017-01-19 09:03 GMT

ವಾಷಿಂಗ್ಟನ್, ಜ.19: ಅಮೆರಿಕದ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮ ಅಧ್ಯಕ್ಷರಾಗಿ ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಬುಧವಾರದಂದು ಸ್ವತಂತ್ರ ಮಾಧ್ಯಮದ ಅಗತ್ಯವನ್ನು ಒತ್ತಿ ಹೇಳಿದರಲ್ಲದೆ ‘‘ನೀವೆಲ್ಲರೂ ಕಠಿಣ ಪ್ರಶ್ನೆಗಳನ್ನು ಕೇಳಬೇಕಾಗಿದೆ’’ ಎಂದು ಪತ್ರಕರ್ತರನ್ನುದ್ದೇಶಿಸಿ ಹೇಳಿದರು. ‘‘ನೀವು ಹೊಗಳುಭಟರಾಗಬಾರದು, ಬದಲಾಗಿ ಎಲ್ಲವನ್ನೂ ಪ್ರಶ್ನಿಸುವ ಜಾಯಮಾನದವರಾಗಬೇಕು’’ ಎಂದು ಒಬಾಮ ಒತ್ತಿ ಹೇಳಿದರು.

ದೇಶದ ಮೂಲಭೂತ ಮೌಲ್ಯಗಳ ಮೇಲೆ ಯಾವುದೇ ದಾಳಿಯಾದರೂ ತಾನು ಅದರ ವಿರುದ್ಧ ದನಿಯೆತ್ತುವುದಾಗಿ ಹೇಳಿದ ಒಬಾಮ, ಮತದಾನದ ಹಕ್ಕು ಹಾಗೂ ವಲಸಿಗರ ಭವಿಷ್ಯದ ಬಗ್ಗೆ ವ್ಯತಿರಿಕ್ತ ನಿರ್ಧಾರಗಳೇನಾದರೂ ಬಂದರೆ ನಾನು ಅದನ್ನುವಿರೋಧಿಸುವುದಾಗಿ ತಿಳಿಸಿದರು.

‘‘ವಿಕಿಲೀಕ್ಸ್ ವಿಸ್ಹಿಲ್ ಬ್ಲೋವರ್ ಚೆಲ್ಸಿಯಾ ಮ್ಯಾನಿಂಗ್ ಅವರ ಶಿಕ್ಷೆಯನ್ನು ಕಡಿಮೆಗೊಳಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿದ ಒಬಾಮ, ''ಈ ನಿಟ್ಟಿನಲ್ಲಿ ನ್ಯಾಯ ದೊರಕಿದೆ ಎಂಬ ಬಗ್ಗೆ ಸಮಾಧಾನವಿದೆ'' ಎಂದರು. ಅವರ ಈ ನಿರ್ಧಾರ ರಿಪಬ್ಲಿಕನ್ ನಾಯಕರಿಂದ ಟೀಕೆಗೊಳಗಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಭವಿಷ್ಯದ ಬಗ್ಗೆ ತಮ್ಮ ಆಶಾಭಾವನೆ ವ್ಯಕ್ತಪಡಿಸಿದ ಒಬಾಮ, ‘‘ನನಗೆ ಅಮೆರಿಕನ್ ಜನರ ಮೇಲೆ ನಂಬಿಕೆಯಿದೆ. ಜನರಲ್ಲಿ ಕೆಟ್ಟದ್ದಕ್ಕಿಂತ ಒಳ್ಳೆಯದು ಹೆಚ್ಚಿದೆ ಎಂದು ನಾನು ನಂಬಿದ್ದೇನೆ. ನಾವು ಕಷ್ಟ ಪಟ್ಟು ದುಡಿದರೆ ಹಾಗೂ ನಮಗೆ ಸರಿಯೆನಿಸಿದ ಹಾಗೆಯೇ ನಡೆದುಕೊಂಡರೆ ನಮ್ಮ ದೇಶ ಚೆನ್ನಾಗಿರುತ್ತದೆ’’ಎಂದು ಒಬಾಮ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News