ದಾಖಲೆಯ ಸಿಕ್ಸರ್ ಬಾರಿಸಿದ ಧೋನಿ
ಕಟಕ್, ಜ.19: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಇಂಗ್ಲೆಂಡ್ ವಿರುದ್ಧದ 2ನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 10ನೆ ಶತಕ ಸಿಡಿಸುವ ಜೊತೆಗೆ 200 ಸಿಕ್ಸರ್ ದಾಖಲಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಕ್ರಿಸ್ ವೋಕ್ಸ್ ಅವರ 42.2ನೆ ಓವರ್‌ನಲ್ಲಿ ಸಿಕ್ಸರ್ ಎತ್ತುವ ಮೂಲಕ 200ನೆ ಸಿಕ್ಸರ್ ಪೂರ್ಣಗೊಳಿಸಿದರು. ಬಳಿಕ ಅದೇ ಓವರ್‌ನ ಐದನೆ ಎಸೆತದಲ್ಲಿ 1 ರನ್ ಗಳಿಸಿ ಶತಕ ಪೂರೈಸಿದರು.
ಧೋನಿ 122 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್ ಇರುವ 134 ರನ್ ಗಳಿಸಿ ಔಟಾದರು. ಇದೀಗ ಅವರು ದಾಖಲಿಸಿದ ಸಿಕ್ಸರ್‌ಗಳ ಸಂಖ್ಯೆ 203ಕ್ಕೆ ಏರಿದೆ. ಧೋನಿ ಏಕದಿನ ಕ್ರಿಕೆಟ್‌ನಲ್ಲಿ 200ಕ್ಕಿಂತ ಹೆಚ್ಚು ಸಿಕ್ಸರ್ ದಾಖಲಿಸಿದ ವಿಶ್ವದ 4ನೆ ದಾಂಡಿಗ.ಪಾಕಿಸ್ತಾನದ ಶಾಹಿದ್ ಅಫ್ರಿದಿ(351), ಶ್ರೀಲಂಕಾದ ಸನತ್ ಜಯಸೂರ್ಯ (270), ವೆಸ್ಟ್‌ಇಂಡೀಸ್‌ನ ಕ್ರಿಸ್ ಗೈಲ್(238) ಗರಿಷ್ಠ ಸಿಕ್ಸರ್ ಸಿಡಿಸಿದವರು.
ಭಾರತದ ಪರ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ 195 ಸಿಕ್ಸರ್ ಮತ್ತು ನಾಯಕ ಸೌರವ್ ಗಂಗುಲಿ 190 ಸಿಕ್ಸರ್ ಸಿಡಿಸಿದ್ದರು. ಇವರ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದಾರೆ.