ಜೈವಿಕ ಇಂಧನ ಬಳಸಿದರೆ ತ್ಯಾಜ್ಯ ಕಡಿಮೆ: ಪ್ರೊ. ಶಾಮ್ ಸುಂದರ್
ಮಂಗಳೂರು, ಜ.19: ಮನೆಗಳಲ್ಲಿ ಅಡುಗೆ ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿಕೆಗೆ ಎಲ್ಲರೂ ಮುಂದಾದರೆ, ಭಾರೀ ಪ್ರಮಾಣದ ತ್ಯಾಜ್ಯವನ್ನು ಕಡಿಮೆ ಮಾಡಬಹುದು ಎಂದು ಮೈಸೂರಿನ ಕ್ರೆಸ್ಟ್ ಸಂಸ್ಥೆಯ ಮುಖ್ಯ ಸಂಯೋಜಕ ಪ್ರೊ. ಶಾಮ್ ಸುಂದರ್ ಹೇಳಿದರು.
ಸ್ವಚ್ಛಭಾರತ್ ಮಿಷನ್‌ನಡಿ ಅಡುಗೆ ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿಕಾ ಘಟಕದ ಕುರಿತು ಜಿಪಂ ಸಭಾಂಗಣದಲ್ಲಿ ಗುರವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು.
ಸೌದೆ ಅಥವಾ ಅಡುಗೆ ಅನಿಲ ಮುಗಿಯುವ ಸಂಪನ್ಮೂಲವಾಗಿದೆ. ಆದರೆ ಅಡುಗೆ ತ್ಯಾಜ್ಯದಿಂದ ಜೈವಿಕ ಇಂಧನವನ್ನು ನವೀಕರಿಸಲು ಸಾಧ್ಯವಿದೆ. ಜೈವಿಕ ಇಂಧನ ಬಳಸಿದಾಗ ಎಲ್‌ಪಿಜಿಯ ಬಳಕೆ ಹೆಚ್ಚಾಗಿ ಆಗುವುದಿಲ್ಲ. ಜೈವಿಕ ಇಂಧನ ತಯಾರಿಸುವಾಗ ದೊರೆಯುವ ಚಗಟನ್ನು ಗೊಬ್ಬರವಾಗಿ ಉಪಯೋಗಿಸಿ ಮತ್ತೆ ತರಕಾರಿ ಬೆಳೆಯಬಹುದು. ಆ ತರಕಾರಿಯ ಕಸವನ್ನು ಮತ್ತೆ ಜೈವಿಕ ಇಂಧನವನ್ನಾಗಿ ಬಳಸಬಹುದು ಎಂದು ಹೇಳಿದರು.
ಮೈಸೂರಿನಲ್ಲಿ ಹಲವು ಕಡೆಗಳಲ್ಲಿ ಜೈವಿಕ ಇಂಧನದ ಘಟಕಗಳನ್ನು ಅಳವಡಿಸಲಾಗಿದೆ. ಮನೆ, ಸಂಸ್ಥೆ, ಹೋಟೆಲ್, ಹಾಸ್ಟೆಲ್‌ಗಳಲ್ಲಿ ಜೈವಿಕ ಇಂಧನ ಘಟಕಗಳನ್ನು ಅಳವಡಿಸಿಕೊಂಡರೆ ಸಮಾಜದ ಸ್ವಾಸ್ಥ್ಯಕ್ಕೂ ಒಳ್ಳೆಯದು. ಪರಿಸರ ಮಾಲಿನ್ಯವೂ ಕಡಿಮೆಯಾಗಲಿದೆ. ಕಚ್ಛಾ ತೈಲವನ್ನು ಉಳಿಸಿದಂತಾಗುತ್ತದೆ ಎಂದು ಪ್ರೊ. ಶ್ಯಾಮ್ ಸುಂದರ್ ಹೇಳಿದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಪಂ ಸಿಇಒ ಡಾ. ಡಿ.ಎಂ. ರವಿ ಮಾತನಾಡಿದರು.
ಜಿಪಂ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಉಪಕಾರ್ಯದರ್ಶಿ ಉಮೇಶ್ ಕೆ., ಕ್ರೆಸ್ಟ್ ಸಂಸ್ಥೆಯ ಧನಂಜಯ್ ಕೆ.ಎನ್. ಉಪಸ್ಥಿತರಿದ್ದರು.