ಕಾಂಗ್ರೆಸ್‌ನ ಕ್ರಿಮಿನಲ್ ರಾಜಕರಣದಲ್ಲಿ ಭಾಗಿಯಾಗಬೇಡಿ : ಪೊಲೀಸರಿಗೆ ಸಿ.ಟಿ ರವಿ ಎಚ್ಚರಿಕೆ
ಮೂಡುಬಿದಿರೆ , ಜ.19 : ದ.ಕ ಜಿಲ್ಲೆಯ ಕಾನೂನು ಸುವ್ಯವಸ್ಥೆ ಪೊಲೀಸರ ಬದಲಾಗಿ ಕಾಂಗ್ರೆಸ್ ಪುಢಾರಿಗಳ ಕೈಯಲ್ಲಿದೆ. ಇಲ್ಲಿನ ಜನಪ್ರತಿನಿಧಿಗಳು ಆಟೋಚಾಲಕರ ಮತ್ತು ಜನ ಸಾಮಾನ್ಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಗೋಕಳ್ಳರಿಗೆ ಬೆಂಬಲ ನೀಡುವುದಲ್ಲದೆ ಹತ್ಯೆಗೆ ಅವಕಾಶ ಮಾಡಿಕೊಡುತ್ತಿದೆ. ಇಂತಹ ಅನ್ಯಾಯ,ಕ್ರಿಮಿನಲ್ ರಾಜಕರಣದಲ್ಲಿ ಭಾಗಿಯಾಗಬೇಡಿ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಎಚ್ಚರಿಕೆ ಪೊಲೀಸರಿಗೆ ನೀಡಿದ್ದಾರೆ.
ಅವರು ಮೂಡುಬಿದಿರೆಯಲ್ಲಿ ಎಪಿಎಂಸಿ ವಿಜಯೋತ್ಸವದ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಮೂಲ್ಕಿ - ಮೂಡುಬಿದಿರೆ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ವಲೇರಿಯನ್ ಕುಟಿನ್ಹೋ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಮತ್ತು ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿರುವುದರ ಬಗ್ಗೆ ಖಂಡಿಸಿ ಭಾರತೀಯ ಜನತಾ ಪಾರ್ಟಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಯ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಯಾರು ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ ಅಥವಾ ದೇಶದ ಪರವಾಗಿ ಕೆಲಸ ಮಾಡುತ್ತಾರೋ ಅವರನ್ನು ಕಂಡರೆ ಪೊಲೀಸರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಆಗುವುದಿಲ್ಲ. ತಮ್ಮ ಪಕ್ಷದಲ್ಲಿ ಅಲ್ಪಸಂಖ್ಯಾತರಿದ್ದರೆ ಕಾಳಜಿ ತೋರುವ ಕಾಂಗ್ರೆಸ್ ಪಕ್ಷ, ಪಕ್ಷ ಬಿಟ್ಟ ನಂತರ ಅವರ ಮೇಲೆ ದೌರ್ಜನ್ಯ ಮಾಡುತ್ತದೆ. ಬಿಜೆಪಿ ಪಕ್ಷವು ಅಲ್ಪ ಸಂಖ್ಯಾತ, ಬಹುಸಂಖ್ಯಾತವೆಂಬ ವಿಂಗಡನೆಯನ್ನು ಮಾಡುವುದಿಲ್ಲ ಹಾಗೂ ತಾರತಮ್ಯದ ಯೋಜನೆಗಳನ್ನು ರೂಪಿಸುವುದಿಲ್ಲ. ಕಾಂಗ್ರೆಸ್ ಮಾತ್ರ ಕ್ರಿಮಿನಲ್ ರಾಜಕರಣ ಮಾಡುತ್ತದೆ ಎಂದು ಹೇಳಿದ ಅವರು, ಕಾಂಗ್ರೆಸ್‌ನ ದುರಾಡಳಿತದ ರಾಜಕರಣವನ್ನು ರಾಜ್ಯದ ಜನತೆ ಅರಿತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರಸ್ ಸೋಲುವುದು ಖಚಿತ. ಕಾಂಗ್ರೆಸ್ ಅರಬ್ಬಿ ಸಮುದ್ರ ಸೇರಲಿದೆ ಎಂಬ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಅವರ ಮಾತು ಸತ್ಯವಾಗಲಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ದೌರ್ಜನ್ಯವನ್ನು ಮೀರಿ ಜಿಲ್ಲೆಯಲ್ಲಿ ಬಿಜೆಪಿ ಬೆಳೆದಿದೆ. ಕೇರಳದಲ್ಲಿಯೂ ಶಕ್ತಿ ಮತ್ತು ಅಧಿಕಾರವಿದ್ದ ಕಮ್ಯೂನಿಸ್ಟರನ್ನು ಎದುರಿಸಿದ್ದೇವೆ. ನಿಮ್ಮ ದೌರ್ಜನ್ಯವನ್ನು ಎದುರಿಸುವ ಸಾಮರ್ಥ್ಯ ಪಕ್ಷದ ಕಾರ್ಯಕರ್ತರಿಗಿದೆ. ಜಿಲ್ಲೆಯಲ್ಲಿ ಹತ್ತಾರು ಕೊಲೆಗಳು ನಡೆದಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಇದಕ್ಕೆ ಇಲ್ಲಿನ ಅಧಿಕಾರಸ್ಥರ ರಕ್ಷಣೆಯೇ ಕಾರಣವಾಗಿದೆ. ರಾಜಕರಣ ಮಾಡಲು ಕಾಂಗ್ರಸ್ ಮತ್ತು ಬಿಜೆಪಿ ಪಕ್ಷ ಇದೆ ಪೊಲೀಸರು ರಾಜಕೀಯ ಮಾಡಬೇಡಿ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿ. ಕಾಂಗ್ರೆಸ್ ಇನ್ನು ಒಂದು ವರ್ಷ ಅಧಿಕಾರದಲ್ಲಿರಬಹುದು. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆಗ ನಮಗೆ ತೊಂದರೆ ಕೊಡುವ ಪೊಲೀಸರನ್ನು ಬಿಜಾಪುರಕ್ಕೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.
ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲ್, ಬಿಜೆಪಿ ಮುಖಂಡರಾದ ಕೆ.ಪಿ ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ಜಿ.ಕೆ.ಸುಲೋಚನಾ ಭಟ್, ಸತ್ಯಜಿತ್ ಸುರತ್ಕಲ್, ಕೆ.ಪಿ.ಸುಚರಿತ ಶೆಟ್ಟಿ, ಭುವನಾಭಿರಾಮ ಉಡುಪ, ಬ್ರಿಜೇಶ್ ಚೌಟ, ಕಿಶೋರ್ ಶೆಟ್ಟಿ ಹಾಗೂ ಸುದರ್ಶನ ಎಂ ಮತ್ತಿತರರು ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಪ್ಪಿತಸ್ಥರನ್ನು ತಕ್ಷಣ 2 ದಿನಗಳಲ್ಲಿ ಬಂಧಿಸಬೇಕು ಹಾಗೂ ತಮ್ಮವರ ವಿರುದ್ಧ ದಾಖಲಿಸಿರುವ ಕೇಸನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಪೊಲೀಸ್ ಆಯುಕ್ತರ ಕಛೇರಿ ಎದುರು ಮತ್ತು ಮೂಡುಬಿದಿರೆ ಠಾಣೆಯ ಎದುರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಲಾಗುವುದು
-ಸಂಸದ ನಳಿನ್ ಕುಮಾರ್ ಕಟೀಲ್