×
Ad

ಹಂಗಾರಕಟ್ಟೆ ಮೀನು ಸಂಸ್ಕರಣಾ ಘಟಕಕ್ಕೆ ವಿರೋಧ: 2ನೇ ದಿನ ಮುಂದುವರಿದ ಗ್ರಾಮಸ್ಥರ, ವಿದ್ಯಾರ್ಥಿಗಳ ಧರಣಿ

Update: 2017-01-19 21:29 IST

ಬ್ರಹ್ಮಾವರ, ಜ.19: ಇಲ್ಲಿಗೆ ಸಮೀಪದ ಮಾಬುಕಳ ಹಂಗಾರಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಯಶಸ್ವಿನಿ ಫಿಶ್ ಮಿಲ್ ಮತ್ತು ಸಂಸ್ಕರಣಾ ಘಟಕ ದಿಂದ ಪರಿಸರದ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಆಗುವ ಸಮಸ್ಯೆಗಳಿಗಾಗಿ ಹಾಗೂ ಘಟಕ ಸ್ಥಾಪಿಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಬುಧವಾರ ಐರೋಡಿ ಗ್ರಾಪಂ ಎದುರು ಪ್ರಾರಂಭಿಸಲಾದ ಗ್ರಾಮಸ್ಥರ ಪ್ರತಿಭಟನೆ ಎರಡನೇ ದಿನವಾದ ಇಂದೂ ಮುಂದುವರಿಯಿತು.

 ನಿನ್ನೆ ಹಂಗಾರಕಟ್ಟೆ ಬಂದರಿನಿಂದ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಾಳ್ಕುದ್ರು ಶಾಲೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ಗ್ರಾಪಂ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಪಂಚಾಯತ್ ಎದುರು ಧರಣಿ ನಡೆಸಿದ್ದಾರೆ. ಗ್ರಾಮಸ್ಥರ ಮುಷ್ಕರ ಎರಡನೇ ದಿನವೂ ನಡೆದಿದ್ದು, ಇಂದೂ ಸಹ ಪಕ್ಕದ ಶಾಲೆಯ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಧರಣಿಯಲ್ಲಿ ಪಾಲ್ಗೊಂಡರು. ಉದ್ಯಮ ಸ್ಥಾಪನೆಗೆ ಅನುಮತಿ ನೀಡಿದ ಗ್ರಾಪಂ ಅಧ್ಯಕ್ಷ ಮತ್ತು ಹಿಂದಿನ ಪಿಡಿಓ ವಿರುದ್ಧ ಜನರು ಘೋಷಣೆಗಳನ್ನು ಕೂಗಿದರು.

 ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಊರಿನ ಹಿರಿಯರಾದ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ , ಪ್ರದೇಶದಲ್ಲಿ ಹಲವು ಕೈಗಾರಿಕೆಗಳು ಬಂದಿದೆ. ಈ ಹಿಂದೆ ಕೂಡ ಹಲವು ವಹಿವಾಟುಗಳು ಇದೇ ಬಂದರಿನ ಮೂಲಕ ನಡೆಯುತ್ತಿತ್ತು. ಈಗಾಗಲೇ ಇಲ್ಲಿ ಆರಂಗೊಂಡಿರುವ ಉದ್ಯಮಗಳಿಂದ ಕುಡಿಯುವ ನೀರು ಕಲುಷಿತಗೊಂಡು ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ ಎಂದರು.

ಈಗ ಆರಂಭಗೊಳ್ಳಲಿರುವ ಮೀನು ಸಂಸ್ಕರಣಾ ಘಟಕದಿಂದ ವಾಯು ಮಾಲಿನ್ಯವುಂಟಾಗಿ ಉಸಿರಾಡಲು ಶುದ್ಧ ಗಾಳಿ ಇರದ ಪರಿಸ್ಥಿತಿ ಉಂಟಾಗಲಿದೆ. ಯಾರದ್ದೋ ಸ್ವಾರ್ಥಕ್ಕಾಗಿ ಕುಡಿಯುವ ನೀರನ್ನು ಕಳೆದುಕೊಂಡಾಗಿದೆ. ಇನ್ನು ಶುದ್ಧ ಗಾಳಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅದಕ್ಕಾಗಿ ನಾವು ಹೋರಾಟ ಆರಂಭಿಸಿ ಯಾಗಿದೆ. ಇನ್ನು ಅದನ್ನು ತೀವ್ರಗೊಳಿಸಿ ಈ ಉದ್ಯಮವನ್ನು ಇಲ್ಲಿಂದ ಓಡಿಸಲು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದರು.

ಮರುಕಳಿಸಿದ ಹೋರಾಟ:  

ಈ ಉದ್ಯಮಕ್ಕೆ ಆರಂಭದಿಂದಲೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು, ತಾಪಂ ಇಓ ಕೋರ್ಟ್‌ನಿಂದ ಪರವಾನಿಗೆ ರದ್ದಿಗೆ ಆದೇಶವಾದ ಹಿನ್ನೆಲೆಯಲ್ಲಿ ತಣ್ಣಗಾಗಿತ್ತು. ಆದರೆ ಘಟಕದ ಇಓ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ, ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಮೀನು ಕಟ್ಟಿಂಗ್ ಯುನಿಟ್ ಸ್ಥಳಾಂತರಿಸಲು ಅವಕಾಶ ನೀಡಿತ್ತು. ಆದರೂ ಹೊಸ ಕಟ್ಟಡದಲ್ಲಿ ಮೀನು ಪೌಡರ್ ಘಟಕವನ್ನು ಮಾಡಲು ಹೊರಟ ಉದ್ಯಮಿ ಕೇಶವ್ ಕುಂದರ್, ರವಿವಾರ ಪೂಜೆ ನಡೆಸಿ ಕೈಗಾರಿಕೆಗೆ ಚಾಲನೆ ನೀಡುವ ಪ್ರಕ್ರಿಯೆಗೆ ಮುಂದಾಗಿದ್ದರು. ಈ ವಿಚಾರ ತಿಳಿದ ಗ್ರಾಮಸ್ಥ ರು ಇದನ್ನು ವಿರೋಧಿಸಿ ರವಿವಾರ ರಸ್ತೆ ತಡೆ ನಡೆಸಿದ್ದರು.

ಪ್ರತಿಭಟನೆ ವೇಳೆ ಮೈಕ್ ಅಳವಡಿಕೆಗೆ ಪೊಲೀಸರಿಂದ ಅನುಮತಿ ಪಡೆದಿಲ್ಲ ಎಂಬ ವಿಷಯದ ಬಗ್ಗೆ ಪ್ರತಿಟನಾಕಾರರು ಮತ್ತು ಪೊಲೀಸರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಪರವಾನಿಗೆ ಇಲ್ಲದೇ ಫಿಶ್ ಮಿಲ್ ಮಾಡಿದರೆ ನೀವು ಕೈ ಕಟ್ಟಿ ಕುಳಿತುಕೊಳ್ಳುತ್ತೀರಿ. ಆದರೆ ನಮಗೆ ಇಲ್ಲಿ ಧ್ವನಿವರ್ಧಕ ಬಳಕೆಗೆ ಪರವಾನಿಗೆ ಕೇಳುತ್ತಿದ್ದೀರಿ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಕದಲ್ಲೇ ಶಾಲೆ, ವಿದ್ಯಾಭ್ಯಾಸಕ್ಕೆ ತೊಂದರೆ: ಮೀನು ಸಂಸ್ಕರಣಾ ಘಟಕದಿಂದ ಪಕ್ಕದಲ್ಲೇ ಇರುವ ಸ್ಥಳೀಯ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ಹೆತ್ತವರ ಆತಂಕ. ಸದ್ಯ ಈ ಶಾಲೆ ಮತ್ತು ಅಂಗನವಾಡಿ ಸೇರಿ ಸುಮಾರು 132 ವಿದ್ಯಾರ್ಥಿಗಳು ಇಲ್ಲಿ ಕಲಿಯುತಿದ್ದಾರೆ. ಇಲ್ಲಿ 45ಕ್ಕೂ ಅಧಿಕ ದಲಿತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತಿದ್ದಾರೆ. ಫಿಶ್‌ಮಿಲ್ ವಾಸನೆಯಿಂದ ವಿದ್ಯಾರ್ಥಿಗಳು ಶಾಲೆಗೆ ಬರಲು ನಿರಾಕರಿಸುತ್ತಿದ್ದಾರೆ. ಘಟಕ ಇಲ್ಲಿ ಪ್ರಾರಂಭಗೊಂಡರೆ ಕಡು ಬಡತನ ದಲಿತ ವಿದ್ಯಾರ್ಥಿಗಳು ಬೇರೆಡೆ ಹೋಗಿ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗದೇ ಕಲಿಕೆಯನ್ನೇ ಮೊಟಕು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ತಾಪಂ ಸದಸ್ಯೆ ಜ್ಯೋತಿ ಉದಯ ಕುಮಾರ್, ಹಿರಿಯರಾದ ಇಬ್ರಾಹಿಂ ಸಾಹೇಬ್, ಜಾನ್ ಬ್ಯಾಪಿಸ್ಟ್, ಬೇಬಿಕೃಷ್ಣ ಸಾಲ್ಯಾನ್, ರಾಜೇಶ್ ಪೂಜಾರಿ, ವಸಂತಿ ಪೂಜಾರ್ತಿ, ಸ್ಥಳೀಯರಾದ ವಿಘ್ನೇಶ್ವರ ಅಡಿಗ, ಮಾಜಿ ಅಧ್ಯಕ್ಷ ವಿಠಲ ಪೂಜಾರಿ, ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸುರೇಶ್ ಅಡಿಗ, ಡೇನಿಸ್ ಡಿಸೋಜಾ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News