ಉಳ್ಳಾಲ : ಪಡಿತರ ವಿತರಣೆಯಲ್ಲಿ ವಿಳಂಬ, ನಾಗರಿಕರ ಆರೋಪ
ಮಂಗಳೂರು, ಜ.19: ಬಿಪಿಎಲ್ ಪಡಿತರ ಚೀಟಿದಾರರಿಗೆ ಕಳೆದ ಸುಮಾರು 15 ದಿನಗಳಿಂದ ಪಡಿತರ ವಿತರಣೆಯಾಗಿಲ್ಲ ಎಂದು ಉಳ್ಳಾಲದ ನಾಗರಿಕರು ಆರೋಪ ಮಾಡಿದ್ದಾರೆ.
ಪಡಿತರ ಚೀಟಿದಾರರು ತಮ್ಮ ರೇಷನ್‌ಗಾಗಿ ಸ್ಥಳೀಯ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಹಿಂದಿರುಗುತ್ತಿದ್ದಾರೆ. ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರಲ್ಲಿ ಕೇಳಿದರೆ ಅಕ್ಕಿ ಬಂದಿಲ್ಲ ಎನ್ನುತ್ತಾರೆ. ಕೆಲವರಿಗೆ ಅಕ್ಕಿ ಸಹಿತ ಇತರ ರೇಷನ್ ಸಾಮಗ್ರಿಗಳು ಕೂಡ ದೊರೆಯುತ್ತಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ.
ಆರ್ಥಿಕ ಹಿಂದುಳಿದವರಿಗೆ ನ್ಯಾಯಬೆಲೆಯಲ್ಲಿ ಪಡಿತರವನ್ನು ವಿತರಿಸುವ ಸರಕಾರದ ಯೋಜನೆಯಲ್ಲಿ ಇದೀಗ ಪಡಿತರ ಚೀಟಿದಾರರು ಕಳೆದ ಸುಮಾರು 15 ದಿನಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ವಾಪಸ್ಸು ಬರುತ್ತಿದ್ದಾರೆ. ಯಾವಾಗ ರೇಷನ್ ಬರುತ್ತದೆ ಎಂಬುದರ ಬಗ್ಗೆ ನ್ಯಾಯಬೆಲೆ ಅಂಗಡಿಯವರು ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎಂದು ಸ್ಥಳೀಯ ಬಡವರು ಪತ್ರಿಕೆಯೊಂದಿಗೆ ದೂರಿಕೊಂಡಿದ್ದಾರೆ.
ಕೂಪನ್ ವ್ಯವಸ್ಥೆಯಲ್ಲಿ ತೊಂದರೆ: ಅಧಿಕಾರಿ
ಪಡಿತರ ಚೀಟಿದಾರರು ರೇಷನ್ ಪಡೆಯಲು ಕೂಪನ್ ವ್ಯವಸ್ಥೆ ಜಾರಿಯಾಗಿರುವುದರಿಂದ ಕೆಲವೆಡೆ ತೊಂದರೆಯುಂಟಾಗಿದ್ದು, ಸೋಮವಾರದೊಳಗೆ ಸರಿಯಾಗಬಹುದು ಎಂದು ಉಳ್ಳಾಲ ಮತ್ತು ಉತ್ತರ ವಲಯದ ಆಹಾಯ ಇಲಾಖೆಯ ಅಧಿಕಾರಿ ಚಂದ್ರಶೇಖರ ಗಟ್ಟಿ ತಿಳಿಸಿದ್ದಾರೆ.
ತನ್ನ ವ್ಯಾಪ್ತಿಗೊಳಪಡುವ 31 ನ್ಯಾಯಬೆಲೆ ಅಂಗಡಿಗಳ ಪೈಕಿ ಮುಕ್ಕಾಲು ಅಂಶ ನ್ಯಾಯಬೆಲೆ ಅಂಗಡಿಗಳಿಗೆ ರೇಷನ್ ವಿತರಣೆ ಮಾಡಲಾಗಿದ್ದು, ಕೆಲವೆಡೆ ಬಿಲ್ ಆಗದಿರುವುದರಿಂದ ತೊಂದರೆಯಾಗಿದೆ. ಕೂಪನ್ ಬಿಲ್ ಆಗಿರುವ ಕಡೆಗಳಲ್ಲಿ ಶೀಘ್ರವಾಗಿ ರೇಷನ್‌ಗಳ ವಿತರಣೆ ಮಾಡಲಾಗಿದೆ. ಜನವರಿ ತಿಂಗಳೊಳಗೆ ಎಲ್ಲ ಸಮಸ್ಯೆ ಬಗೆಹರಿಯಬಹುದ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.